ಬೆಂಗಳೂರು: ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರನ್ನೇ ಕಡೆಗಣಿಸಲಾಗುತ್ತಿದೆ ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದ್ದು, ಇದರ ವಿರುದ್ಧ ಸಮರ ಸಾರಲು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮತ್ತೊಮ್ಮೆ ಸಜ್ಜಾಗಿದೆ.
ʼಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ’ ಎಂಬ ಘೋಷಣೆಯಡಿಯಲ್ಲಿ ಜುಲೈ 1ರಿಂದ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಯಲಿದೆ. ಸಾವಿರಾರು ಕರವೇ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ. ಸರೋಜಿನಿ ಮಹಿಷಿ ವರದಿ ಜಾರಿಯಾಗುವುದು ಕನ್ನಡಿಗರ ಬದುಕಿನ ಮತ್ತು ಉದ್ಯೋಗದ ಪ್ರಶ್ನೆಯಾಗಿದೆ. ರಾಮಕೃಷ್ಣ ಹೆಗಡೆ ಅವಧಿಯ ವೇಳೆ ತಯಾರಾಗಿದ್ದ ವರದಿಯು ಇಲಲಿವರೆಗೆ ಕಾಯ್ದೆಯಾಗದೇ ಹಾಗೆಯೇ ಉಳಿದಿದೆ. ಅಧಿಕಾರಕ್ಕೆ ಬಂದ ಯಾವ ಪಕ್ಷವೂ ವರದಿ ಜಾರಿ ಮಾಡದೆ ಕನ್ನಡಿಗರಿಗೆ ಅನ್ಯಾಯ ಮಾಡಿವೆ ಎಂದು ದೂರಿದ್ದಾರೆ.
ಬೆಂಗಳೂರಿನಲ್ಲಿರುವ ಬಹುರಾಷ್ಟ್ರಿಯ ಕಂಪನಿಗಳೂ ಈ ನೆಲದ ಮಕ್ಕಳಿಗೆ ಕೆಲಸ ನೀಡುತ್ತಿಲ್ಲ. ಕೇವಲ ಡಿ ದರ್ಜೆ ಕೆಲಸ ನೀಡುತ್ತಿವೆಯೇ ವಿನಃ ಎ,ಬಿ, ಸಿ ದರ್ಜೆಯ ವೃತ್ತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿಲ್ಲ. ಆದ್ದರಿಂದ ಮಹಿಷಿ ವರದಿಯಂತೆ ಖಾಸಗಿ ಸಂಸ್ಥೆಗಳಲ್ಲಿ ಶೇಕಡ 100ರಷ್ಟು ಸಿ ಮತ್ತು ಡಿ ದರ್ಜೆಯ ಕೆಲಸಗಳನ್ನು ಹಾಗೆಯೇ ಎ ಮತ್ತು ಬಿ ದರ್ಜೆಯಲ್ಲಿ ಶೇಕಡ 70-80ರಷ್ಟು ಕೆಲಸಗಳನ್ನು ಕನ್ನಡಿಗರಿಗೆ ಮೀಸಲಿಡಬೇಕಾಗಿ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಲು ಈ ಹೋರಾಟ ಹಮ್ಮಿಕೊಂಡಿದ್ದೇವೆ. ಈ ಪ್ರತಿಭಟನೆಯು ಶಾಂತಿ ಸ್ವರೂಪದಲ್ಲಿದ್ದು ರಾಜ್ಯ ಸರ್ಕಾರ ಏನೂ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಮುಂದಿನ ಹೋರಾಟ ಬಿಗಿಯಾಗಿರಲಿದೆ ಎಂದು ಎಚ್ಚರಿಸಿದ್ದಾರೆ.
ಉದ್ಯೋಗಗಳಲ್ಲಿ ಕನ್ನಡಿಗರ ಕಡೆಗಣನೆ ವಿಚಾರವನ್ನು ಕರವೇ ಗಂಭೀರವಾಗಿ ಕಡೆಗಣಿಸಿದ್ದು, ಕನ್ನಡಿಗರ ಪರ ಮತ್ತೊಮ್ಮೆ ನಿಂತಿದೆ. ಈ ಹಿಂದೆ ಕರ್ನಾಟಕದಲ್ಲಿ ಕನ್ನಡಕ್ಕೇ ಮಾನ್ಯತೆ ಇರಬೇಕು. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯು ಆಗ್ರಹಿಸಿತ್ತು. ಇದರ ಪರಿಣಾಮ ರಾಜ್ಯ ಸರ್ಕಾರವೂ ನಾಮಫಲಕಗಳು ಶೇ 60ರಷ್ಟು ಕನ್ನಡದ ಭಾಷೆಯಲ್ಲೇ ಇರಬೇಕೆಂಬ ನಿಯಮ ರೂಪಿಸಿತು. ಇದರ ಅನ್ವಯ ಇಂದು ಎಲ್ಲೆಡೆ ಫಲಕಗಳಲ್ಲಿ ಕನ್ನಡ ರಾರಾಜಿಸುತ್ತಿದೆ.