“ಮಜಾ ಟಾಕೀಸ್” ವರಲಕ್ಷ್ಮಿ ಇನ್ನು ನೆನಪು ಮಾತ್ರ!

ಬೆಂಗಳೂರು: ಆಂಗ್ಲ ಭಾಷೆಯ ಒಂದೇ ಒಂದು ಅಕ್ಷರವನ್ನೂ ಬಳಸದೆ ನಿರೂಪಣೆ ಮಾಡಿ “ಅಚ್ಚಗನ್ನಡದ ಏಕೈಕ ನಿರೂಪಕಿ” ಎನಿಸಿಕೊಂಡಿದ್ದ ಅಪರ್ಣಾ ವಸ್ತಾರೆ(57) ಅವರು ಇಂದು ಬನಶಂಕರಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ವಿಚಾರವನ್ನು ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಖಚಿತಪಡಿಸಿದ್ದು, ಅವರು ಕೆಲ ದಿನಗಳಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕ್ಯಾನ್ಸರ್ ಆವರಿಸಿ ಎರಡು ವರ್ಷವಾಗಿತ್ತು. ಅಲ್ಲದೆ ನಾಲ್ಕನೇ ಹಂತ ತಲುಪಿತ್ತು. ಕೊನೆಗೂ ಇಂದು ಉಸಿರು ನಿಲ್ಲಿಸಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.

ನಿರೂಪಣೆ ಅಷ್ಟೇ ಅಲ್ಲದೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ 1984ರ ಚಿತ್ರ ‘ಮಸಣದ ಹೂವು’ ಸಿನಿಮಾದಲ್ಲಿ ಬಣ್ಣ ಹಚ್ಚುವ ಮುಖೇನ ಅಪರ್ಣಾ ಬೆಳ್ಳಿತೆರೆಗೂ ಕಾಲಿಟ್ಟಿದ್ದರು. ಶಿವರಾಜ್ ಕುಮಾರ್ ನಟನೆಯ ‘ಇನ್ಸ್ಪೆಕ್ಟರ್ ವಿಕ್ರಂ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಮೂಡಲ ಮನೆ, ಮುಕ್ತ ಸೇರಿದಂತೆ ಹಲವು ಹಿಟ್ ಧಾರಾವಾಹಿಗಳಲ್ಲೂ ಅಪರ್ಣಾ ಮಿಂಚಿದ್ದರು.

ಕರ್ನಾಟಕ ಸರ್ಕಾರದ ಬಹುದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿರರ್ಗಳವಾಗಿ ನಡೆಸಿಕೊಡುತ್ತಿದ್ದ ಇವರು, ಚಂದನ ವಾಹಿನಿಯಲ್ಲೂ ತಮ್ಮ ಪಾರಮ್ಯತೆ ಮೆರೆದಿದ್ದಾರೆ. ಬಹುಮುಖ ಪ್ರತಿಭೆಯಾಗಿದ್ದ ಇವರು ಭಾರತ ಸರ್ಕಾರದ “ವಿವಿಧ ಭಾರತಿ”ಯಲ್ಲಿ ರೇಡಿಯೋ ಜಾಕಿ ಆಗಿಯೂ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.

ಭಾರತ ಸಂಸ್ಕೃತಿಯ ಹಿಡಿದಗನ್ನಡಿಯಂತಿರುವ ದೀಪಾವಳಿ ಹಬ್ಬವನ್ನು ಸತತ ಎಂಟು ಗಂಟೆಗಳ ಕಾಲ ಆಚರಿಸಿ ದಾಖಲೆ ಬರೆದಿದ್ದರು. 2013ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ರಿಯಾಲಿಟಿ ಶೋ ಬಿಗ್ ಬಾಸ್ 1ರ ಸ್ಪರ್ಧಿ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಹಾಸ್ಯ ಕಲಾವಿದ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ “ಮಜಾ ಟಾಕೀಸ್”ನಲ್ಲಿ ಹಿರಿಯ ಮಹಿಳೆ ವರಲಕ್ಷ್ಮಿ ಪಾತ್ರಧಾರಿಯಾಗಿ ರಾಜ್ಯದೆಲ್ಲೆಡೆ ಮನೆಮಾತಾಗಿದ್ದರು. ಇವರ ಧ್ವನಿ ಇಂದಿಗೂ ನಮ್ಮ ಮೆಟ್ರೋದಲ್ಲಿ ಮಾರ್ದನಿಸುತ್ತಿದೆ.

Leave a Reply

Your email address will not be published. Required fields are marked *