ಬೆಂಗಳೂರು: ನಟ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರ ವಿಚ್ಛೇದನ ಅರ್ಜಿಯ ಆರಂಭಿಕ ವಿಚಾರಣೆಯನ್ನು ಕೌಟುಂಬಿಕ ನ್ಯಾಯಾಲಯವು ಇಂದು ನಡೆಸಿದೆ. ಈ ವೇಳೆ, ಮುಂದಿನ ವಿಚಾರಣೆಯನ್ನು ಆ.23ರಂದು ನಡೆಸುವುದಾಗಿ ತಿಳಿಸಿ ಮುಂದೂಡಿದೆ.
ಇನ್ನು ಯುವ ನೀಡಿದ್ದ ಡೈವೋರ್ಸ್ ನೋಟಿಸ್ ಗೆ ಶ್ರೀದೇವಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಇದಕ್ಕೆ ನಿರಾಕರಿಸಿದ ನ್ಯಾಯಾಧೀಶೆ ಕಲ್ಪನಾ, ಮೊದಲು ಇಬ್ಬರಿಗೂ ಕೌನ್ಸೆಲಿಂಗ್ ನೀಡಬೇಕು. ಆ ತರುವಾಯ ಇಬ್ಬರ ತೀರ್ಮಾನವನ್ನೂ ಆಲಿಸಬೇಕಿದೆ. ಬಳಿಕವಷ್ಟೇ ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇನ್ನು ನ್ಯಾಯಾಲಯದ ವಿಚಾರಣೆಗೆಂದು ಅಮೆರಿಕಾದಿಂದ ಆಗಮಿಸಿದ್ದ ಶ್ರೀದೇವಿ, ಮತ್ತೆ ಅಮೆರಿಕಾಗೆ ಹಾರಿದ್ದಾರೆ. ಈ ಕುರಿತು ಮಾತನಾಡಿರುವ ಶ್ರೀದೇವಿ, ನಾನು ಹಾರ್ವರ್ಡ್ ವಿವಿಯಲ್ಲಿ ಅಭ್ಯಸಿಸುತ್ತಿರುವ ಕಾರಣ ವಾಪಸಾಗುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸಮಯ ಬಂದಾಗ ಉತ್ತರ ನೀಡುತ್ತೇನೆ. ನಾನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.