ಬೆಂಗಳೂರು: ಕೆಲಸದಾಕೆಯೊಂದಿಗೆ ಬಹಳ ಸಲುಗೆಯಿಂದ ಇರುತ್ತಾನೆ ಎಂದು ಬೇಸತ್ತ ಮಹಿಳೆ, ಪತಿಯನ್ನು ಮುದ್ದೆ ತೊಳಿಸುವ ಕೋಲಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಸುದ್ದೆಗುಂಟೆ ಪಾಳ್ಯದಲ್ಲಿ ನಡೆದಿದೆ.
ಈ ಘಟನೆಯು ಜೂ.೨೭ರಂದು ನಡೆದಿತ್ತು. ಮೃತನನ್ನು ಭಾಸ್ಕರ್ ಎಂದು ಹೇಳಲಾಗಿದ್ದು, ಆರೋಪಿ ಮಹಿಳೆಯನ್ನು ಶ್ರುತಿ ಎಂದು ಗುರುತಿಸಲಾಗಿದೆ. ಘಟನೆ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿದ್ದ ಪೊಲೀಸರು, ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಅಲ್ಲದೆ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು.
ಈ ವೇಳೆ ಆರೋಪಿಯು, ಮನೆಗೆ ನಿತ್ಯ ಕುಡಿದು ಬರುವಂತೆ ಅಂದೂ ಪತಿ ಕುಡಿದು ಬಂದಿದ್ದರು. ಆದರೆ ಶೌಚಾಲಯದಲ್ಲಿ ಕಾಲು ಜಾರಿ ಬಿದ್ದಿದ್ದರು. ಬಳಿಕ ಸ್ನಾನ ಮಾಡಿಸಿ ಮಲಗಿಸಿದ್ದೆ. ಆದರೆ ಬೆಳಗ್ಗೆ ಎದ್ದು ನೋಡಿದಾಗ ಮಲಗಿದ್ದಲ್ಲಿಯೇ ಕೊನೆಯುಸಿರೆಳೆದಿದ್ದರು ಎಂದು ಕಥೆ ಕಟ್ಟಿದ್ದಳು.
ಮರಣೋತ್ತರ ಪರೀಕ್ಷೆಯಲ್ಲಿ ಮುಖ ಮತ್ತು ದೇಹದ ಇತರೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ ಎಂಬುದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ತೀವ್ರ ವಿಚಾರಣೆ ನಡೆಸಲಾಗಿ, ನನ್ನ ಪತಿ ಕೆಲಸದಾಕೆಯೊಂದಿಗೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ. ಈ ಬಗ್ಗೆ ನನಗೆ ತುಂಬಾ ಸಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಿಟ್ಟಿನ ಕೋಲಿನಿಂದ ಹೊಡೆದಿದ್ದೆ. ಅತಿಯಾದ ಹೊಡೆತಕ್ಕೆ ಕೊನೆಯುಸಿರೆಳೆದಿದ್ದಾನೆ. ಆದರೂ ತನಿಖೆಯ ಹಾದಿ ತಪ್ಪಿಸಲು ಮೃತಪಟ್ಟ ಗಂಡನಿಗೆ ಸ್ನಾನ ಮಾಡಿಸಿ ಮಲಗಿಸಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿ ಮಹಿಳೆಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.