ಭಾರತದಲ್ಲಿ ಯಾರನ್ನಾದರೂ ಬಂಧಿಸುವ ಮೊದಲು, ಪೊಲೀಸರು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ (CrPC), 1973ರಡಿಯಲ್ಲಿ ನಿಶ್ಚಿತಗೊಂಡಿರುವ ಮತ್ತು ಭಾರತದ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿರುವ ಕೆಲವು ಕಾನೂನು ವಿಧಾನಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಲೇಬೇಕು. ಇವುಗಳು ಅನ್ಯಾಯವಾದ ಬಂಧನಗಳನ್ನು ತಪ್ಪಿಸಲು ಅಗತ್ಯವಾಗಿದೆ.
ಇದಕ್ಕೆ ಸಂಬಂಧಿಸಿದ ಮುಖ್ಯ ನಿಯಮಗಳು ಇಲ್ಲಿವೆ:
✅ 1. ಕಾನೂನು ಸಮರ್ಥನೆ:
ಬಂಧನವು ವ್ಯಕ್ತಿಯು ಗುರುತಿಸಬಹುದಾದ ಅಪರಾಧವನ್ನು (ಅಂದರೆ, ಪೊಲೀಸರು ವಾರಂಟ್ ಇಲ್ಲದೆ ಬಂಧಿಸಬಹುದಾದ ಅಪರಾಧ) ಮಾಡಿದ್ದಾನೆ ಎಂಬ ಸಮಂಜಸವಾದ ಅನುಮಾನ ಅಥವಾ ವಿಶ್ವಾಸಾರ್ಹ ಮಾಹಿತಿಯನ್ನು ಆರೋಪಿಗೆ ಒದಗಿಸಬೇಕು.
ಗುರುತಿಸಲಾಗದ ಅಪರಾಧ(non-cognizable offences)ಗಳಿಗೆ ಮ್ಯಾಜಿಸ್ಟ್ರೇಟ್ ಅವರ ಪೂರ್ವಾನುಮತಿ ಬೇಕು.
✅ 2. ಪೊಲೀಸ್ ಅಧಿಕಾರಿಯ ಗುರುತು:
ಬಂಧಿಸುವ ಮೊದಲು ಪೊಲೀಸರು ತಮ್ಮ ಹೆಸರು, ಹುದ್ದೆ ಮತ್ತು ಬ್ಯಾಡ್ಜ್ ಸಂಖ್ಯೆಯನ್ನು ತಿಳಿಸಬೇಕು ಮತ್ತು ತಮ್ಮ ಗುರುತಿನ ಚೀಟಿಯನ್ನು ತೋರಿಸುವುದು ಕಡ್ಡಾಯ.
D.K. ಬಸು Vs ಪಶ್ಚಿಮ ಬಂಗಾಳ ರಾಜ್ಯ(1997) ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳ ಅನುಸಾರ, ಬಂಧಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯು ಸ್ಪಷ್ಟವಾಗಿ ಕಾಣುವ ಹೆಸರಿನ ಟ್ಯಾಗ್ ಧರಿಸಿರಬೇಕು.
✅ 3. ಬಂಧನದ ಮೇಮೊ:
ಬಂಧಿಸುವ ಸಮಯದಲ್ಲಿ ಒಂದು “ಬಂಧನದ ಮೇಮೊ(Arrest memo)” ತಯಾರಿಸಬೇಕು. ಇದರಲ್ಲಿ ಈ ವಿವರಗಳು ಇರಬೇಕು:
>ಬಂಧಿಸುತ್ತಿರುವ ಸಮಯ ಮತ್ತು ದಿನಾಂಕ
>ಬಂಧಿಸಲು ಕಾರಣ
>ಬಂಧಿಸಿದ ಅಧಿಕಾರಿಯ ಹೆಸರು ಮತ್ತು ವಿವರ
>ಬಂಧಿತ ವ್ಯಕ್ತಿಯ ಸಹಿ
>ಸಾಕ್ಷಿದಾರರ ಸಹಿ(ಆರೋಪಿಯ ಕುಟುಂಬದ ಸದಸ್ಯ ಅಥವಾ ಸ್ಥಳೀಯ ವ್ಯಕ್ತಿ)
✅ 4. ಬಂಧಿತ ವ್ಯಕ್ತಿಗೆ ಮಾಹಿತಿ:
ಸಂವಿಧಾನದ ವಿಧಿ 22ರ ಅನುಸಾರ, ಬಂಧನಕ್ಕೆ ಒಳಗಾದ ವ್ಯಕ್ತಿಗೆ ಬಂಧಿಸಲಾಗುತ್ತಿರುವ ಕಾರಣವೇನು ಎಂಬ ಬಗ್ಗೆ ಆತನಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಲೇಬೇಕು. ಆತನ ಅಪರಾಧವು ಜಾಮೀನು ಪಡೆಯಲು ಅರ್ಹ ಎಂದಾದರೆ, ಆ ಬಗ್ಗೆ ಆತನಿಗಿರುವ ಹಕ್ಕಿನ ಬಗ್ಗೆಯೂ ಅಧಿಕಾರಿ ಮಾಹಿತಿ ನೀಡಬೇಕು.
✅ 5. ಬಂಧಿತ ವ್ಯಕ್ತಿಗೆ ತಿಳಿಸಲು ಅವಕಾಶ:
ಪೊಲೀಸರು ಬಂಧಿತ ವ್ಯಕ್ತಿಗೆ ತನ್ನ ಕುಟುಂಬದ ಓರ್ವ ಸದಸ್ಯ ಅಥವಾ ಗೆಳೆಯರಿಗೆ ಮಾಹಿತಿ ನೀಡಲು ಅವಕಾಶ ನೀಡಬೇಕು. ಈ ವೇಳೆ ಆರೋಪಿಯು ಯಾರನ್ನು ಸಂಪರ್ಕಿಸುತ್ತಾನೋ ಆತನ ಹೆಸರು, ದೂರವಾಣಿ ಸಂಖ್ಯೆ, ಊರು ಸೇರಿದಂತೆ ಇನ್ನಿತರೇ ಅಂಶಗಳನ್ನು ಬಂಧನ ಮೇಮೊದಲ್ಲಿ ದಾಖಲಿಸಬೇಕು.
✅ 6. ವೈದ್ಯಕೀಯ ಪರೀಕ್ಷೆ:
ಬಂಧನದ ಸಮಯದಲ್ಲಿ ಮತ್ತು ಬಂಧಿಸಿದ ಬಳಿಕ ವಶದಲ್ಲಿರುವ ಆರೋಪಿಯನ್ನು ಪ್ರತೀ 48 ಗಂಟೆಗೆ ಒಮ್ಮೆ ವೈದ್ಯಕೀಯ ಪರೀಕ್ಷೆಗೆ ಪಳಪಡಿಸಲೇಬೇಕು. ಪೊಲೀಸ್ ವಶದಲ್ಲಿದ್ದಾಗ ಹಿಂಸೆ ನೀಡುವುದನ್ನು ಮತ್ತು ಕಾನೂನಿನ ದುರುಪಯೋಗವನ್ನು ತಡೆಯುವುದು ಇದರ ಮೂಲ ಉದ್ದೇಶವಾಗಿದೆ.
✅ 7. ಮ್ಯಾಜಿಸ್ಟ್ರೇಟ್ ಮುಂದೆ ಹಾಜರು:
ಸಂವಿಧಾನದ ಕಲಂ 22(2) ಮತ್ತು CrPC ಸೆಕ್ಷನ್ 57 ಪ್ರಕಾರ, ಬಂಧಿತ ವ್ಯಕ್ತಿಯನ್ನು ಬಂಧಿಸಿದ 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲೇಬೇಕು. ಆರೋಪಿಯನ್ನು ಕರೆದೊಯ್ಯುವ ಪ್ರಯಾಣ ವೇಳೆಯನ್ನು ಇದಕ್ಕೆ ಪರಿಗಣಿಸಲಾಗುವುದಿಲ್ಲ.
ಈ ಕ್ರಮಗಳನ್ನು ಪಾಲಿಸದೇ ಬಂಧಿಸಿದರೆ, ಬಂಧನವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ ಮತ್ತು ಸಂಬಂಧಿಸಿದ ಪೊಲೀಸರು ಶಿಸ್ತುಕ್ರಮಕ್ಕೆ ಅಥವಾ ಅಪರಾಧದ ಶಿಕ್ಷೆಗೆ ಒಳಪಡಬಹುದು.