ವಿಜಯಪುರ: ಚುನಾವಣೆಗೂ ಮುನ್ನವೇ ಕೆಲ ರಾಜ್ಯ ಬಿಜೆಪಿ ಸಂಸದರು ತಮಗೆ ಟಿಕೆಟ್ ನೀಡಲಿಲ್ಲವೆಂದು ತಮ್ಮ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ ಚುನಾವಣೆ ಮುಕ್ತಾಯವಾಗಿದ್ದು, ಹೊಸದಾಗಿ ಗೆದ್ದಿರುವ ಸಂಸದರು ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಆರಂಭಿಸಿದ್ದಾರೆ.
ಈ ಕುರಿತು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮಾತನಾಡಿದ್ದು, ಬಿಜೆಪಿ ದಲಿತ ವಿರೋಧಿ ಪಕ್ಷವೆಂದು ಹಲವರು ಆರೋಪಿಸಿದ್ದರು. ಆದರೂ ನಮ್ಮ ಪಕ್ಷಕ್ಕೆ ದಲಿತರು ಬೆಂಬಲ ನೀಡಿದರು. ಪರಿಣಾಮ ದಕ್ಷಿಣ ಭಾರತದಲ್ಲಿ ಸತತವಾಗಿ ಏಳು ಬಾರಿ ಗೆಲುವು ಸಾಧಿಸಿದ ಸಂಸದ ಎಂಬ ಪ್ರಖ್ಯಾತಿಗೆ ನಾನು ಒಳಗಾಗಿದ್ದೇನೆ. ಆದರೂ ನಮ್ಮ ವರಿಷ್ಠರು ಸಚಿವ ಸ್ಥಾನ ನೀಡುವಾಗ ನನ್ನನ್ನು ಪರಿಗಣಿಸಲಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಸದರು ಬೇಸರ ಹೊರ ಹಾಕಿದ್ದಾರಾದರೂ ತಮ್ಮ ಮುಂದಿನ ನಡೆ ಏನೆಂಬುದನ್ನು ತಿಳಿಸಿಲ್ಲ.
ಇನ್ನು ರಾಜ್ಯದಲ್ಲಿ ಮೊದಲ ಬಾರಿ ಗೆದ್ದಿರುವ ವಿ.ಸೋಮಣ್ಣ, ಮೂರು ಬಾರಿ ಗೆದ್ದಿರುವ ಹೆಚ್.ಡಿ.ಕುಮಾರಸ್ವಾಮಿ, ಐದು ಬಾರಿ ಗೆದ್ದಿರುವ ಪ್ರಹ್ಲಾದ್ ಜೋಶಿ, ಮೂರು ಬಾರಿ ಗೆದ್ದಿರುವ ಶೋಭಾ ಕರಂದ್ಲಾಜೆ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.