ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಮಾಹಿತಿ ನೀಡುತ್ತಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ದರ್ಶನ್ ಪತ್ನಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂದು ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ವೇಳೆ, ತಾವು ಹಾಗೂ ಗೃಹ ಸಚಿವರಿಬ್ಬರೂ ಪ್ರಕರಣದ ಮೊದಲನೇ ಆರೋಪಿ ಪವಿತ್ರಾ ಗೌಡ ಅವರನ್ನು ನಟ ದರ್ಶನ್ ಅವರ ಪತ್ನಿ ಎಂದು ಉಲ್ಲೇಖಿಸಿದ್ದೀರಿ. ಇದರಿಂದ ನನ್ನ ಹಾಗೂ ನನ್ನ ಮಗನ ಭವಿಷ್ಯಕ್ಕೆ ತೊಂದರೆಯಾಗಲಿದೆ. ಪವಿತ್ರಾಗೌಡ ದರ್ಶನ್ ಅವರ ಸ್ನೇಹಿತೆ. ಆದರೆ ನಾನು ದರ್ಶನ್ ಅವರ ಏಕೈಕ ಪತ್ನಿ. ನಮ್ಮ ಮದುವೆಯು ೨೦೦೩ರ ಮೇ ೧೯ರಂದು ಧರ್ಮಸ್ಥಳದಲ್ಲಿ ಅದ್ಧೂರಿಯಾಗಿ ನಡೆಯಿತು. ತಮ್ಮ ಪೊಲೀಸ್ ಇಲಾಖೆಯ ರೆಕಾರ್ಡ್ ಗಳಲ್ಲಿ ನಾನು ಮಾತ್ರವೇ ದರ್ಶನ್ ಪತ್ನಿ ಎಂದು ಬದಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್ ಸೇರಿದಂತೆ ಒಟ್ಟು ೧೭ ಮಂದಿಯ ಬಂಧನವಾಗಿದೆ. ದರ್ಶನ್ ಹಾಗೂ ಸಹಚರರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದೇ ಕಡೆ ಇದ್ದರೂ ದರ್ಶನ್ ಸಹಚರರನ್ನು ಭೇಟಿ ಮಾಡುತ್ತಿಲ್ಲ ಹಾಗೂ ಮಾತನಾಡಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.