ಎಲ್ಲರೂ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು: ಶಂಕರಲಿಂಗ ಶಿವಾಚಾರ್ಯ

ಕಲಬುರಗಿ: ಮರಗಿಡಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ. ಪ್ರತಿಯೊಬ್ಬರೂ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕೆಂದು ದತ್ತಸಾಯಿ ಶನೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷ, ಶ್ರೀ ಶಂಕರಲಿಂಗ ಶಿವಾಚಾರ್ಯರು ಕರೆ ನೀಡಿದ್ದಾರೆ.

ಔರಾದ್ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಸಿಗಳನ್ನು ನೆಟ್ಟು ಹೆಮ್ಮರವಾಗಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು. ಮುಂದಿನ ಪೀಳಿಗೆಯ ಬದುಕು ಹಸನಾಗಬೇಕಾದರೆ ಪ್ರತಿಯೊಬ್ಬರೂ ಪರಿಸರ ಸಂರಕ್ಷ ಣೆ ಮಾಡಬೇಕು. ಗಿಡ ಮರಗಳನ್ನು ಮಕ್ಕಳಂತೆ ಆರೈಕೆ ಮಾಡಿದಾಗ ಅಪಾರ ಆನಂದ ಸಿಗುತ್ತದೆ. ಅದು ಜೀವ ಜಗತ್ತಿಗೆ ಮನುಷ್ಯನೊಬ್ಬ ಮಾಡಬಹುದಾದ ಮಹತ್ಕಾರ್ಯವೂ ಹೌದು. ಪರಿಸರ ನಮ್ಮೆಲ್ಲರ ಸೊತ್ತು, ಅದನ್ನು ಜೋಪಾನವಾಗಿ ಕಾಪಾಡುವುದು ನಮ್ಮ ಜವಾಬ್ದಾರಿ.

ಎಲ್ಲೋ ಅರಣ್ಯ ನಾಶ ಮಾಡಿದರೆ ಇನ್ನೆಲ್ಲೋ ಅದರ ಪರಿಣಾಮ ಕಾಣಿಸುತ್ತದೆ. ಬೆಟ್ಟಗುಡ್ಡಗಳಲ್ಲೂ ಪ್ರವಾಹ ಉಂಟಾಗುತ್ತದೆ. ಕೆಲವೆಡೆ ಬರ ಪರಿಸ್ಥಿತಿ ತಲೆದೊರುತ್ತದೆ. ಹವಾಮಾನ, ಋತುಮಾನದಲ್ಲಿ ವ್ಯತ್ಯಾಸ ಆಗುತ್ತಿರುತ್ತವೆ. ಇದೆಲ್ಲವೂ ಅರಣ್ಯ ನಾಶ, ಪರಿಸರ ಮಾಲಿನ್ಯದ ಪ್ರತಿಫಲವೇ ಆಗಿದೆ ಎಂದಿದ್ದಾರೆ.

ಸಮಿತಿಯ ಉಪಾಧ್ಯಕ್ಷ ಕಿರಣ ಉಪ್ಪೆ, ಪಟ್ಟಣ ಪಂಚಾಯ್ತಿ ಸದಸ್ಯ ದಯಾನಂದ ಘೂಳೆ, ಸಂಗಯ್ಯ ಸ್ವಾಮಿ, ಕಾಂಗ್ರೆಸ್ ಮುಖಂಡ ಸುಧಾಕಾರ್ ಕೊಳ್ಳುರ್, ತಿಪ್ಪಾರೆಡ್ಡಿ, ದೇವಸ್ಥಾನದ ಅರ್ಚಕರಾದ ಉಮಾಕಾಂತ ಸ್ವಾಮಿ ಹಾಗೂ ರತಿಕಾಂತ ಖರಜಿಗೆ ಮಸ್ಕಲ್ ಸೇರಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *