ಬೆಂಗಳೂರು: ಹೃದಯಾಘಾತವು ಹಾಸನ ಜಿಲ್ಲೆಗೆ ಮಾರಕ ಅಂಟಿಕೊಂಡಂತಿದೆ. ಹೌದು, ಕೇವಲ ಒಂದೇ ತಿಂಗಳಿನಲ್ಲಿ ಹದಿನಾಲ್ಕು ಮಂದಿ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದ್ದಾರೆ. ವಿಪರ್ಯಾಸವೆಂದರೆ ಅಸುನೀಗಿದವರಲ್ಲಿ ಬಹುತೇಕ ಯುವಕರೇ ಆಗಿದ್ದಾರೆ ಎಂಬುದು ಶೋಚನೀಯ. ಇಂದೂ ಕೂಡ ಓರ್ವ ಯುವತಿ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾಳೆ.
ಮೃತ ಯುವತಿಯನ್ನು ಸುಪ್ರಿಯಾ ಎಂದು ಹೇಳಲಾಗಿದೆ. ಈಕೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಟ್ಟಳ್ಳಿ ಗ್ರಾಮದ ನಿವಾಸಿ ಕೃಷ್ಣಮೂರ್ತಿ ಹಾಗೂ ರೂಪ ಎಂಬುವವರ ಪುತ್ರಿಯಾಗಿದ್ದಾರೆ. ಇಡೀ ಕುಟುಂಬ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನೆಲೆಸಿತ್ತು. ಕುಟುಂಬಸ್ಥರೊಂದಿಗೆ ಮನೆಯಲ್ಲಿದ್ದಾಗಲೇ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಯುವತಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಉಸಿರು ಚೆಲ್ಲಿದ್ದಾಳೆ ಎನ್ನಲಾಗಿದೆ.
ಮಗಳ ಆಕಸ್ಮಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.