ನವದೆಹಲಿ: ಮಹಿಳೆಯ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪೊಲೀಸರ 85 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆ ಮೂಲಕ ತನಿಖೆಗೆ ಸಹಕರಿಸಿದ್ದಾರೆಂದು ಪರಿಗಣಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಎಸ್ಐಟಿ ಸುಪ್ರೀಂ ಮೊರೆಹೋಗಿತ್ತು.
ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ಎಸ್ಐಟಿ ಪರ ವಕೀಲ ಕಪಿಲ್ ಸಿಬಲ್, ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ಅವರಿಗೆ ಕೋರ್ಟ್ ಜಾಮೀನು ನೀಡಿದ್ದು ದುರದೃಷ್ಟಕರ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ರಾಜಕೀಯವನ್ನು ಬದಿಗಿಟ್ಟು ಜಾಮೀನು ಏಕೆ ಕೊಡಲಾಯಿತೆಂದು ಆಲೋಚಿಸಿ. ಅವರು ಎರಡು ಮಕ್ಕಳ ತಾಯಿ, ಅವರಿಗೆ ಈಗಾಗಲೇ 55 ವರ್ಷ ವಯಸ್ಸಾಗಿದೆ. ಪ್ರಕರಣದಲ್ಲಿ ಅವರು ಆರೋಪಿ ಎಂದು ಹೇಳಲು ಯಾವುದೇ ನೇರ ಸಾಕ್ಷ್ಯಗಳಿಲ್ಲ. ಹಾಗಾಗಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.