ಬೆಂಗಳೂರು: ಲಾಯರ್ ಜಗದೀಶ್ ಮಹಾದೇವ್ ವಿರುದ್ಧ ಬೆಂಗಳೂರಿನ ಆಟೋ ಚಾಲಕರು ತಿರುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿರುವ ಆಟೋ ಚಾಲಕರಿಗೆ ಕೆಲ ಕ್ಯಾಬ್ ಡ್ರೈವರ್ಸ್ ಕೂಡ ಸಾಥ್ ನೀಡುತ್ತಿದ್ದು, ತರಹೆವಾರಿಯಾಗಿ ಡೈಲಾಗ್ ಹೊಡೆಯುತ್ತಾ ಠಕ್ಕರ್ ನೀಡುತ್ತಿದ್ದಾರೆ.
ಕೆಲವರು ‘ನನ್ನ ಡಿಎಲ್ ಆಗಿರುವ ವಯಸ್ಸು ನಿನಗೆ ವಯಸ್ಸಾಗಿಲ್ಲ’ ಎನ್ನುತ್ತಿದ್ದರೆ, ಇನ್ನೂ ಕೆಲವರು ದರ್ಶನ್ ಸಿನಿಮಾದ ದೃಶ್ಯಗಳ ತುಣುಕುಗಳನ್ನು ಹಾಕಿ ಟಾಂಗ್ ಕೊಡುತ್ತಿದ್ದಾರೆ. ಕೆಲವರಂತೂ ‘ಕೊಡಿಗೇಹಳ್ಳಿಯ ಜನ ಹಿಂಡು ಹಿಂಡಾಗಿ ಸೇರಿ ಹೊಡೆದಿದ್ದು ನೆನಪಿಲ್ಲವೇ?, ಆರೇಳು ತಿಂಗಳು ಜೈಲಿಗೆ ಹೋಗಿ ಬಂದ್ರೂ ಚಾಲಕರ ಸಹವಾಸ ಬಿಟ್ಟಿಲ್ಲವೇ?, ಕ್ಯಾಬ್ ಚಾಲಕರು ಹೊಡೆದಿದ್ದಕ್ಕೆ ಆಸ್ಪತ್ರೆಗೆ ಹೋಗಿ ಬಂದೆ, ಈಗ ಮತ್ತೆ ಆಟೋ ಚಾಲಕರು ದಾಳಿ ಮಾಡಿದರೆ ನಿಮ್ಮ ಆಸ್ಪತ್ರೆ ಬಿಲ್ ನಾನೇ ಕಟ್ಟುತ್ತೇನೆ’ ಎಂದೆಲ್ಲಾ ಕಿಚಾಯಿಸುತ್ತಿದ್ದಾರೆ.
ಇತ್ತ ಲಾಯರ್ ಜಗದೀಶ್ ಕೂಡ, ‘ನೀವು ಆಫ್ಟರ್ ಆಲ್ ಆಟೋ ಚಾಲಕರು. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ವಲಸೆ ಬಂದಿದ್ದೀರಿ. ನನ್ನ ವಿರುದ್ಧ ಬಾಯಿ ಹರಿಬಿಟ್ಟರೆ ಎಫ್ಐಆರ್ ಹಾಕಿಸುವ ಮುಖೇನ ನನ್ನ ಕರಾಮತ್ತು ಏನೆಂದು ತೋರಿಸುತ್ತೇನೆ. ಅಲ್ಲದೆ ಬೆಂಗಳೂರಿನಲ್ಲಿ ವಾಸವಿರುವ 1.40 ಕೋಟಿ ನಿವಾಸಿಗಳಿಗೆ ಕೇವಲ 1.40 ಲಕ್ಷ ಆಟೋಗಳಿದ್ದರೆ ಸಾಕು. ಆದರೆ 18 ಲಕ್ಷಕ್ಕೂ ಹೆಚ್ಚು ಆಟೋಗಳು ಅನಧಿಕೃತವಾಗಿ ಸಂಚಾರ ಮಾಡುತ್ತಿವೆ. ಈ ಬಗ್ಗೆ ಆಯುಕ್ತರ ಗಮನಕ್ಕೆ ತಂದು ಅನಧಿಕೃತ ಆಟೋಗಳನ್ನು ಬೆಂಗಳೂರಿನಿಂದ ಆಚೆ ಹಾಕಿಸುತ್ತೇನೆ’ ಎಂದೆಲ್ಲಾ ಗುಡುಗುತ್ತಿದ್ದಾರೆ.
ಆಟೋ ಚಾಲಕರು ಮತ್ತು ಜಗದೀಶ್ ನಡುವಿನ ವಾಗ್ಯುದ್ಧದಿಂದ ಎಚ್ಚೆತ್ತಿರುವ ಪೊಲೀಸರೂ ಕೂಡ ಆಟೋ ಚಾಲಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಎಮಿಷನ್ ಟೆಸ್ಟ್ ನಿಂದ ಹಿಡಿದು ಎಲ್ಲಾ ರೀತಿಯ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಯೋನಿಫಾರ್ಮ್ ಧರಿಸದ ಆಟೋ ಚಾಲಕರಿಗೂ ಮುಲಾಜಿಲ್ಲದೆ ಫೈನ್ ಜಡಿಯುತ್ತಿದ್ದಾರೆ.
ಪೊಲೀಸರ ವರ್ತನೆಯಿಂದ ಎಚ್ಚೆತ್ತುಕೊಂಡ ಕೆಲ ಚಾಲಕರು, ‘ಎಲ್ಲಾ ದಾಖಲೆಗಳನ್ನೂ ಇಟ್ಟುಕೊಂಡು ನಿಯಮಾನುಸಾರ ಕೆಲಸ ಮಾಡಿ. ಅಲ್ಲದೆ ಜಗದೀಶ್ ಹೇಳಿದ್ದಕ್ಕೇ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಅವರ ವಿರುದ್ಧ ಸುಖಾ ಸುಮ್ಮನೆ ಡೈಲಾಗ್ ಹೊಡೆಯಬೇಡಿ. ಅವರು ನಿಮ್ಮ ಮೇಲೆ ಎಫ್ಐಆರ್ ದಾಖಲಿಸಿದರೆ ನಿಮ್ಮ ಜೀವನವೇ ಬೀದಿಗೆ ಬರಲಿದೆ. ಹಾಗಾಗಿ ಎಚ್ಚೆತ್ತುಕೊಳ್ಳಿ, ಇಲ್ಲದಿದ್ದರೆ ನಷ್ಟ ಅನುಭವಿಸುವವರು ನೀವೇ’ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ಬೈಕ್ ಟ್ಯಾಕ್ಸಿ ಪ್ರಯಾಣ ಸುರಕ್ಷಿತವಲ್ಲದ ಕಾರಣ ಈ ಸೇವೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿತ್ತು. ಈ ನಿರ್ಧಾರವನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಆ ಬಳಿಕ ಆಟೋ ಚಾಲಕರು ನಮ್ಮದೇ ಸಾಮ್ರಾಜ್ಯ ಎಂದುಕೊಂಡು ಕೇವಲ ಒಂದು ಕಿ.ಮೀ.ಗೆ 200 ರೂ. ಪಡೆಯುತ್ತಿದ್ದಾರೆ. ಅಲ್ಲದೆ ಮೀಟರ್ ಹಾಕುತ್ತಿಲ್ಲ ಎಂದು ಕೆಲ ಸಾರ್ವಜನಿಕರು ಅವಲತ್ತುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಗದೀಶ್ ಅನಧಿಕೃತ ಆಟೋಗಳ ಸಂಚಾರ ರದ್ದು ಮಾಡಬೇಕೆಂದು ಧ್ವನಿ ಎತ್ತಿದ್ದರು. ಈ ವಿಚಾರವೇ ಸದ್ಯ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.