ದೆಹಲಿ: ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರಿಗೆ ಭಾರತ ಸರ್ಕಾರವು ಕೀರ್ತಿ ಚಕ್ರವನ್ನು ಘೋಷಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಪದಕವನ್ನು ಪ್ರದಾನ ಮಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸುತ್ತಿದ್ದ ಸಿಂಗ್ ಪತ್ನಿ ಸ್ಮೃತಿ ಸಿಂಗ್ ಕಣ್ಣೀರು ಸುರಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಡ್ರಾಮಾ ಮಾಡುತ್ತಿಲ್ಲ, ನಮ್ಮದು ಮೊದಲ ನೋಟದಲ್ಲೇ ಹುಟ್ಟಿದ ಪ್ರೀತಿ. ಮೊದಲ ಬಾರಿಗೆ ಕಾಲೇಜಿನಲ್ಲಿ ಭೇಟಿಯಾಗಿದ್ದೆವು. ಅದಾದ ಒಂದೇ ತಿಂಗಳಿಗೆ ಅವರು ರಕ್ಷಣಾ ಮೆಡಿಕಲ್ ಕಾಲೇಜಿಗೆ ಸೇರಿಕೊಂಡರು. ನಾನು ಎಂಜಿನಿಯರಿಂಗ್ ಪದವಿಗೆ ಸೇರಿಕೊಂಡೆ. ಅದಾದ ಬಳಿಕ 8 ವರ್ಷ ನಮ್ಮ ಪ್ರೀತಿ, ಸ್ನೇಹ ಮುಂದುವರಿಯಿತು. ಮುಂದೊಂದು ದಿನ ಮದುವೆ ಮಾಡಿಕೊಳ್ಳಲು ನಿಶ್ಚಯಿಸಿದೆವು. ಅಂದುಕೊಂಡಂತೆ ಮದುವೆಯೂ ಆಯಿತು. ನನಗೆ ನನ್ನ ಪತಿ ಕಳೆದ ವರ್ಷದ ಜು.18ರಂದು ಕರೆ ಮಾಡಿದ್ದರು. ಆಗ ನಾವು ಸುಂದರವಾದ ಮನೆಯೊಂದನ್ನು ಕಟ್ಟಿಕೊಳ್ಳೋಣ, ಜತೆಗೆ ಮಕ್ಕಳನ್ನೂ ಮಾಡಿಕೊಳ್ಳೋಣ ಎಂದು ಹೇಳಿದ್ದರು. ಆದರೆ ಮರುದಿನ ಬೆಳಗ್ಗೆ ಅವರಿಲ್ಲ ಎಂಬ ಸುದ್ದಿ ಬಂತು ಎಂದು ಗದ್ಗದಿತರಾಗಿದ್ದಾರೆ.
ಸಿಯಾಚಿನ್ ನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದಾಗ ತನ್ನ ಸಹ-ಯೋಧನನ್ನು ಅಗ್ನಿ ಅವಘಡದಿಂದ ರಕ್ಷಿಸಲು ಯತ್ನಿಸಿ ಸಿಂಗ್ ಕೊನೆಯುಸಿರೆಳೆದಿದ್ದರು. ಕೀರ್ತಿ ಚಕ್ರವು ರಕ್ಷಣಾ ಸಚಿವಾಲಯದ ಸಿಬ್ಬಂದಿಗೆ ನೀಡುವ ಎರಡನೇ ಅತ್ಯುನ್ನತ ಪದಕವಾಗಿದ್ದು, ಇದನ್ನು ಅವಿಸ್ಮರಣೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ. 2023ರ ಫೆಬ್ರವರಿಯಲ್ಲಿ ಈ ಜೋಡಿಯ ವಿವಾಹವಾಗಿತ್ತು.