ರಾಜ್ಯದಲ್ಲಿ ಡೆಂಗ್ಯೂಗೆ 6 ಬಲಿ.. ಎಚ್ಚರ ವಹಿಸಿ!

ಬೆಂಗಳೂರು: ಹವಾಮಾನ ವೈಪರೀತ್ಯ ಹಾಗೂ ವಿಪರೀತವಾದ ಮಳೆ ಪರಿಣಾಮ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಜನವರಿಯಿಂದ ಈವರೆಗೆ(ಜೂನ್‌) 93,012 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಈ ಪೈಕಿ 40,918 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಪರೀಕ್ಷೆ ತರುವಾಯ 4364 ಮಂದಿಗೆ ಡೆಂಗ್ಯೂ ಜ್ವರ ಇರುವುದು ದೃಢಪಟ್ಟಿದೆ.

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ನಿವಾಸಿ ಸಾನಿಯಾ ಎಂಬ ಬಾಲಕಿ ಇಂದು ಮೃತಪಟ್ಟಿದ್ದಾಳೆ. ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದರು.

ಇಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಣ್ಣೂರು ಗ್ರಾಮದ 6 ವರ್ಷದ ಬಾಲಕಿ ಸಾಕ್ಷಿಗೂ ಡೆಂಗ್ಯೂ ಸೋಕಿರುವುದು ದೃಢಪಟ್ಟಿದೆ. ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಒಂದರಲ್ಲೇ 149 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡು ಶುಚಿತ್ವ ಕಾಪಾಡಿಕೊಳ್ಳುವ ಮುಖೇನ ಸೊಳ್ಳೆಗಳು ಹತ್ತಿರ ಸುಳಿಯದಂತೆ ನೋಡಿಕೊಳ್ಳಿ.

Leave a Reply

Your email address will not be published. Required fields are marked *