ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ನಕಲಿ ಖಾತೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಧಮ್ಕಿ ಹಾಕುವ, ಅಶ್ಲೀಲ ಪೋಸ್ಟ್‌ಗಳನ್ನು ಹರಿಬಿಡುವ ಮುಖೇನ ಕಿರುಕುಳ ನೀಡಲು ಯತ್ನಿಸುತ್ತಿರುತ್ತಾರೆ. ಇದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿವೆ. ಇಂತಹ ಸಂದರ್ಭಗಳಲ್ಲಿ ಕಿರುಕುಳಕ್ಕೆ ಒಳಗಾದವರು ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಗಮನಿಸಿ..
1. ಮಾಹಿತಿ ತಂತ್ರಜ್ಞಾನ ಕಾಯ್ದೆ(IT Act, 2000) ಅಡಿಯಲ್ಲಿ ದೂರು ದಾಖಲಿಸಿ:
- ಸೆಕ್ಷನ್ 66C – ಗುರುತು ಕದಿಯುವಿಕೆ (Fake account/ID)
- ಸೆಕ್ಷನ್ 66D – ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿತ್ವಕ್ಕೆ ಧಕ್ಕೆ ತರುವುದು.
- ಸೆಕ್ಷನ್ 67 – ಅಶ್ಲೀಲ ವಿಡಿಯೋ, ಫೋಟೋ ಪ್ರಕಟಿಸುವುದು
- ಸೆಕ್ಷನ್ 67A – ಲೈಂಗಿಕವಾಗಿ ಶೋಷಿಸುವ ವಿಷಯವನ್ನು ಪ್ರಕಟಿಸುವುದು
- ಸೆಕ್ಷನ್ 69A – ಆನ್‌ಲೈನ್ ಕಂಟೆಂಟ್ ನಿರ್ಬಂಧಿಸಲು ಸರ್ಕಾರಕ್ಕೆ ಅಧಿಕಾರ
➡️ ಸೈಬರ್ ಕ್ರೈಂ ಸೆಲ್ ಅಥವಾ ಆನ್‌ಲೈನ್‌ನಲ್ಲಿ ದೂರು ನೀಡಿ: https://cybercrime.gov.in
2. ಭಾರತೀಯ ದಂಡ ಸಂಹಿತೆ(IPC) ಅಡಿ FIR ದಾಖಲಿಸಿ:
ಹೆಚ್ಚಿನ ಅಪರಾಧಗಳು IPC ಅಡಿಯಲ್ಲಿ ಬರುತ್ತವೆ:
- IPC ಸೆಕ್ಷನ್ 354D – ಆನ್‌ಲೈನ್ ನಲ್ಲಿ ಹಿಂಬಾಲಿಸುವುದು.
- IPC ಸೆಕ್ಷನ್ 499 & 500 – ಮಾನಹಾನಿ ಮಾಡುವುದು.
- IPC ಸೆಕ್ಷನ್ 503 – ಧಮ್ಕಿ, ಬೆದರಿಕೆ ಹಾಕುವುದು.
- IPC ಸೆಕ್ಷನ್ 507 – ಅನಾಮಧೇಯವಾಗಿ ಬೆದರಿಕೆ ಹಾಕುವುದು.
- IPC ಸೆಕ್ಷನ್ 509 – ಪದ, ಸನ್ನೆ ಅಥವಾ ಪೋಸ್ಟ್ ಗಳ ಮುಖೇನ ಮಹಿಳೆಯ ಗೌರವಕ್ಕೆ ಧಕ್ಕೆ ತರುವುದು.
➡️ ನಿಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ FIR ದಾಖಲಿಸಿ.
3. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ನೇರವಾಗಿ ವರದಿ ಮಾಡಿ:
Facebook, Instagram, Twitter, YouTube ಮುಂತಾದವುಗಳಲ್ಲಿ ನಿಮಗೆ ಕಿರುಕುಳ ಆಗುತ್ತಿದೆ ಎಂದಾದರೆ, ಇದೇ ಸೇವೆ ಒದಗಿಸುತ್ತಿರುವ ವೇದಿಕೆಗಳಿಗೆ ನಕಲಿ ಖಾತೆಗಳ ಬಗ್ಗೆ ದೂರು ನೀಡಿ.
- ನಕಲಿ ಖಾತೆ, ಕಿರುಕುಳ ಮತ್ತು ಅಶ್ಲೀಲ ವಿಷಯವಸ್ತುವಿನ ಬಗ್ಗೆ ವರದಿ ಮಾಡಿ.
- ಅಶ್ಲೀಲ ವಿಷಯವಸ್ತುವನ್ನು ತೆಗೆದುಹಾಕುವಂತೆ ಮತ್ತು ನಕಲಿ ಖಾತೆಯನ್ನು ನಿಷ್ಕ್ರಿಯಗೊಳಿಸುವಂತೆ ಮನವಿ ಮಾಡಿ.
- ನಿಮ್ಮ ವಿರುದ್ಧ ದ್ವೇಷ ಭಾಷಣ ಮಾಡಿದ್ದರೂ ಮನವಿ ಮಾಡಿ.
➡️ ಇದು ತ್ವರಿತವಾಗಿ ಕಂಟೆಂಟ್ ತೆಗೆಯಲು ಸಹಾಯ ಮಾಡುತ್ತದೆ.
4. ಸಿವಿಲ್ ನ್ಯಾಯಾಲಯದಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿ:
- ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿ ಮಾನಹಾನಿ ಪ್ರಕರಣ ದಾಖಲಿಸಿ, ಹಣಕ್ಕೆ ಬೇಡಿಕೆ ಇಡಿ.
- ಆ ವ್ಯಕ್ತಿ ನಿಮ್ಮ ಬಗ್ಗೆ ಮತ್ತೆ ಪೋಸ್ಟ್ ಹಾಕದಂತೆ ಇಂಜೆಕ್ಷನ್ ಆರ್ಡರ್ ತಂದು ತಡೆಯೊಡ್ಡಿ.
👩🦰 5. ಮಹಿಳೆಯರು & ಮಕ್ಕಳಿಗಾಗಿ ಕಾನೂನಿನ ವಿಶೇಷ ರಕ್ಷಣೆ:
- POCSO Act ಅಡಿಯಲ್ಲಿ ಮಕ್ಕಳ ಅಶ್ಲೀಲ ವಿಷಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ.
- ಮಹಿಳೆಯರು ಕಿರುಕುಳ ಎದುರಿಸುತ್ತಿದ್ದರೆ, ರಾಷ್ಟ್ರೀಯ ಅಥವಾ ರಾಜ್ಯ ಮಹಿಳಾ ಆಯೋಗಗಳ ಮೊರೆಹೋಗಬಹುದು. ಈ ಆಯೋಗಗಳ ವೆಬ್‌ಸೈಟ್‌ನಲ್ಲಿಯೇ ದೂರು ನೀಡಲು ಅವಕಾಶವಿದೆ.
- ಸುಪ್ರೀಂ ಕೋರ್ಟಿನ ಮಾರ್ಗಸೂಚಿ ಪ್ರಕಾರ, ಮಹಿಳೆಯರು ಮಾನಹಾನಿ ಅಥವಾ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರುಗಳನ್ನು ನೀಡಿದಲ್ಲಿ ಅವುಗಳನ್ನು ಪೊಲೀಸರು ತಕ್ಷಣವೇ ದಾಖಲಿಸಿಕೊಳ್ಳಬೇಕು.