ಬೆಂಗಳೂರು: ಸಿಎಂ ಬದಲಾವಣೆ ವಿಚಾರ ಮೇಲಿಂದ ಮೇಲೆ ಮುನ್ನೆಲೆಗೆ ಬರುತ್ತಿರುವ ಕಾರಣ ಸಿದ್ದರಾಮಯ್ಯಗೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ. ಅವಮಾನ ಸಹಿಸಿಕೊಂಡು ಸಿಎಂ ಸ್ಥಾನದಲ್ಲಿ ಮುಂದುವರಿಯಬಾರದೆಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯನವರು ಸಿಎಂ ಸ್ಥಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಲಿ ಎಂಬ ಚಂದ್ರಶೇಖರ ಸ್ವಾಮೀಜಿ ಅವರ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಮೂವರು ಡಿಸಿಎಂ ವಿಚಾರದ ಹಿಂದಿನ ಗಾಯಕರು ಸಿದ್ದರಾಮಯ್ಯನವರೇ. ಹಾಗಾಗಿ ತಮ್ಮ ತಮ್ಮನ ಸೋಲು ಸಹಿಸಿಕೊಳ್ಳಲಾಗದ ಡಿಕೆಶಿ ಕೌಂಟರ್ ಆಗಿ ಸಿಎಂ ಸ್ಥಾನ ಬಿಟ್ಟು ಕೊಡುವ ವಿಚಾರವನ್ನು ಮುನ್ನೆಲೆಗೆ ಬರುವಂತೆ ಮಾಡಿಸಿದ್ದಾರೆ ಎಂದೂ ಪರೋಕ್ಷವಾಗಿ ಕುಟುಕಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೇ ವರ್ಷವಾಗಿದೆ. ಕಾಂಗ್ರೆಸ್ ನಲ್ಲಿ ಆಂತರಿಕ ಗೊಂದಲವಿದ್ದು, ಸರ್ಕಾರಕ್ಕೆ ಆಪತ್ತಿದೆ ಎಂಬುವುದಕ್ಕೆ ಇಂದಿನ ಬೆಳವಣಿಗೆಗಳೇ ಸಾಕ್ಷಿ. ಈ ಸರ್ಕಾರ ಬಹಳ ದಿನ ಇರುವುದಿಲ್ಲವೆಂದು ನಾವು ಈ ಹಿಂದೆಯೇ ಹೇಳಿದ್ದೆವೆಂದು ಅಶೋಕ್ ಕಿಡಿಕಾರಿದ್ದಾರೆ.