ನವದೆಹಲಿ: ಹದಿನೇಳು ವರ್ಷದ ಬಳಿಕ ಟಿ೨೦ ವಿಶ್ವಕಪ್ ಅನ್ನು ಗೆದ್ದು ತವರಿಗೆ ಮರಳಿದ ಟೀಂ ಇಂಡಿಯಾ ಆಟಗಾರರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಯ ಕಳೆದಿದ್ದಾರೆ.
ಬಾರ್ಬಡೋಸ್ ನಿಂದ ನೇರವಾಗಿ ದೆಹಲಿಗೆ ಬಂದಿಳಿದ ಆಟಗಾರರು ಬಳಿಕ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಆಟಗಾರರೊಂದಿಗೆ ಭೋಜನ ಸವಿದ ಪ್ರಧಾನಿ ಮೋದಿ, ಬಳಿಕ ಆಟಗಾರರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿ, ಎಲ್ಲರನ್ನೂ ಅಭಿನಂದಿಸಿದರು.
ಇನ್ನು ಜೂ.೨೯ರಂದು ನಡೆದ ಫೈನಲ್ ಪಂದ್ಯದ ವೇಳೆ ಕ್ಯಾಚ್ ಹಿಡಿದು ಪಂದ್ಯದ ತಿರುವನ್ನೇ ಬದಲಿಸಿದ್ದ ಸೂರ್ಯಕುಮಾರ್ ಯಾದವ್, ಸ್ಪರ್ಧಾತ್ಮಕ ಸ್ಕೋರ್ ಆಗಲು ಸಹಾಯ ಮಾಡಿದ್ದ ಕೊಹ್ಲಿ, ಪಂದ್ಯದ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಸಾಧನೆಯನ್ನೂ ಕೂಡ ಮೋದಿ ಈ ಮೊದಲೇ ದೂರವಾಣಿ ಕರೆ ಮಾಡಿ ಅಭಿನಂದಿಸಿ, ಕೊಂಡಾಡಿದ್ದರು. ಅಂದಹಾಗೆ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್ ಗಳ ಗೆಲುವು ಸಾಧಿಸಿತ್ತು.