DROUPADI MURMU: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ನವದೆಹಲಿ: ಸಂಸತ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದಾರೆ.

ಈ ವೇಳೆ, ಈ ಬಾರಿಯ ಲೋಕಸಭಾ ಚುನಾವಣೆಯು ಪ್ರಪಂಚದಾದ್ಯಂತ ಚರ್ಚೆಗೆ ಕಾರಣವಾಗಿದೆ. ಕಾಶ್ಮೀರದ ಜನ ಮತದಾನ ಮಾಡುವ ಮುಖೇನ ಇತಿಹಾಸ ನಿರ್ಮಿಸಿದ್ದಾರೆ. ಭಾರತವು ಸ್ಥಿರ ಮತ್ತು ಸ್ಪಷ್ಟ ಬಹುಮತದ ಸರ್ಕಾರವನ್ನು ಹೊಂದಿದೆ. ಕಳೆದ 10 ವರ್ಷಗಳಲ್ಲಿ ಭಾರತ ಕ್ಷಿಪ್ರ ಪ್ರಗತಿ ಸಾಧಿಸುತ್ತಿದ್ದು, ಆರ್ಥಿಕ ಬೆಳವಣಿಗೆಯ ವೇಗವು ನಿರೀಕ್ಷೆಗಿಂತ ಹೆಚ್ಚಾಗಿದೆ. ಪರಿಣಾಮ ಆರ್ಥಿಕ ಸಾಧನೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ, 5ನೇ ಸ್ಥಾನಕ್ಕೇರಿದೆ.

ವಿಶ್ವದೆಲ್ಲೆಡೆ ಕೊರೋನಾ ಮಹಾಮಾರಿಯ ಅಬ್ಬರದ ನಡುವೆಯೂ ಭಾರತ ತನ್ನ ಬೆಳವಣಿಗೆಯಲ್ಲಿ ಅಭಿವೃದ್ಧಿ ಸಾಧಿಸಿದೆ. ರಾಷ್ಟ್ರೀಯ ಹಿತಾಸಕ್ತಿ ವಿಚಾರಗಳಲ್ಲಿ ಅತ್ಯುತ್ತಮ ನಿರ್ಣಯಗಳನ್ನು ಕೈಗೊಂಡಿದ್ದುದೇ ಇದಕ್ಕೆ ಕಾರಣ. ವಿಶ್ವ ಬೆಳವಣಿಗೆಗೆ ಭಾರತ ಸದ್ಯ 15% ಪಾಲು ನೀಡುತ್ತಿದೆ. ಈ ಬಾರಿಯ ಬಜೆಟ್ ಐತಿಹಾಸಿಕವಾಗಿರಲಿದೆ. ಸರ್ಕಾರವು ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಿದೆ. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವನ್ನಾಗಿ ಮಾಡುವಲ್ಲಿ ನಮ್ಮ ಸರ್ಕಾರ ಶ್ರಮಿಸಲಿದೆ.

ಕಳೆದ ಹತ್ತು ವರ್ಷಗಳಲ್ಲಿ ಭಾರತ ವಿಶ್ವದ ಹಲವು ಸಮಸ್ಯೆಗಳನ್ನು ಬಗೆಹರಿಸಿದೆ. ವಿಶ್ವದ ಹಲವು ರಾಷ್ಟ್ರಗಳಿಗೆ ಭಾರತ ಸ್ಪೂರ್ತಿಯಾಗಿದೆ. ಪರಿಣಾಮ ಭಾರತವನ್ನು ಸಾಕಷ್ಟು ದೇಶಗಳು ಬೆಂಬಲಿಸುತ್ತಿವೆ.

ಕಳೆದ ಹತ್ತು ವರ್ಷಗಳಲ್ಲಿ ಹೈಸ್ಪೀಡ್ ರೈಲು, ಮೆಟ್ರೋ ಹಾಗೂ ಬುಲೆಟ್ ಟ್ರೈನ್ ಕಾಮಗಾರಿಗಳಲ್ಲಿ ವೇಗ ಕಂಡುಬಂದಿದೆ. ಈಶಾನ್ಯ ರಾಜ್ಯಗಳಲ್ಲೂ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಸಾಗುತ್ತಿವೆ. ಸಹಕಾರಿ ಕ್ಷೇತ್ರದಲ್ಲೂ ಭಾರತ ಮಹತ್ತರ ಸಾಧನೆ ಮಾಡುತ್ತಿದೆ ಎಂದು ಕೊಂಡಾಡಿದ್ದಾರೆ.

Leave a Reply

Your email address will not be published. Required fields are marked *