ಬೆಂಗಳೂರು: ಕೆ.ಆರ್.ನಗರ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ರ್ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಇಂದು ಘೋಷಿಸಿದೆ. ಕಳೆದ ಏಳು ತಿಂಗಳಿಂದ ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ, ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಿ ತೀರ್ಪಿತ್ತಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಾಲಯದಿಂದ ತೀರ್ಪು ಹೊರಬೀಳುತ್ತಿದ್ದಂತೆ ನ್ಯಾಯಾಲಯದ ಹೊರಗೆ ಕುರ್ಚಿ ಮೇಲೆ ಕುಳಿತಿದ್ದ ಪ್ರಜ್ವಲ್, ಗದ್ಗದಿತರಾಗಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಪ್ರಜ್ವಲ್ ಅವರನ್ನು ಅವರ ಪರ ವಕೀಲರು ಸಂತೈಸಿದ್ದಾರೆ.
ತೀರ್ಪಿನ ಬಳಿಕ ಮಾತನಾಡಿದ ಬಿಜೆಪಿ ನಾಯಕ ದೇವರಾಜೇಗೌಡ, ‘ನ್ಯಾಯಾಲಯ ಸರಿಯಾದ ತೀರ್ಪನ್ನೇ ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದರಿಂದ ಸಮಾಜಕ್ಕೆ ಸ್ಪಷ್ಟ ಸಂದೇಶ ತಲುಪಿದೆ’ ಎಂದಿದ್ದಾರೆ.
ಮೂಲಗಳ ಪ್ರಕಾರ, ಕನಿಷ್ಠ 10 ವರ್ಷಗಳ ಜೈಲುಶಿಕ್ಷೆ ಪ್ರಕಟವಾಗಲಿದೆ. ಅದನ್ನೂ ಮೀರಿದರೆ ಜೀವಾವಧಿ ಶಿಕ್ಷೆ ಪ್ರಕಟಗೊಳ್ಳಲಿದೆ. 14 ವರ್ಷಗಳ ಜೈಲುವಾಸ ಅನುಭವಿಸಿದ ನಂತರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಆಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಅದೂ ಸಾಧ್ಯವಾಗದಿದ್ದರೆ 30 ವರ್ಷದವರೆಗೆ ಜೈಲುವಾಸ ಮುಂದುವರಿಯಬಹುದು ಎನ್ನಲಾಗುತ್ತಿದೆ.
ಇನ್ನು ಪ್ರಜ್ವಲ್ ಅವರಿಗೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರಲಿದೆ. ಮನೆಗೆಲಸದವರನ್ನು, ಕೆಲ ಪೊಲೀಸರೂ ಸೇರಿದಂತೆ ಸರ್ಕಾರಿ ನೌಕರರನ್ನು ಹಾಗೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಕೆಲ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಹಾಗೂ ಯಾರಿಗೂ ಹೇಳದಂತೆ ಧಮ್ಕಿ ಹಾಕಿದ್ದ ಆರೋಪ ಪ್ರಜ್ವಲ್ ವಿರುದ್ಧ ಕೇಳಿಬಂದಿತ್ತು.