ಬೆಂಗಳೂರು: ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್ ಸಿನಿಮಾ ಬಂತು ಅಂದ್ರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಇಂದು ಪ್ರಭಾಸ್ ಅಭಿನಯದ ʼಕಲ್ಕಿ 2898 ಎಡಿʼ ಸಿನಿಮಾ ತೆರೆಗೆ ಅಪ್ಪಳಿಸಿದ್ದು, ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಕರ್ನಾಟಕದಲ್ಲೂ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಈ ಸಿನಿಮಾ ಕನ್ನಡದಲ್ಲೂ ಮೂಡಿಬಂದಿದೆ.
ಸರಣಿ ಫ್ಲಾಪ್ ಕಂಡಿದ್ದ ಪ್ರಭಾಸ್‌ಗೆ ಇತ್ತೀಚೆಗಷ್ಟೇ ಪ್ರಶಾಂತ್ ನೀಲ್ ನಿರ್ದೇಶಿಸಿದ್ದ ‘ಸಲಾರ್’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಹಿಟ್ ತಂದುಕೊಟ್ಟಿತ್ತು. ಇದರ ಬಳಿಕ ‘ಕಲ್ಕಿ’ ಸಿನಿಮಾದ ಮೇಲೆ ಸಿನಿಪ್ರಿಯರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆ ‘ಕಲ್ಕಿ’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರ ಮನಗೆದ್ದಿದ್ದು, ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ‘ಕಲ್ಕಿ’ ಚಿತ್ರದ ಕೆಲವು ದೃಶ್ಯಗಳನ್ನು ಅಭಿಮಾನಿಗಳು ಹಂಚಿಕೊಳ್ಳುವ ಮೂಲಕ ಸಿನಿಮಾ ಸೂಪರ್ ಎಂದು ಬರೆದುಕೊಂಡಿದ್ದಾರೆ.
‘ಕಲ್ಕಿ’ ಸಿನಿಮಾದಲ್ಲಿ ವಿವಿಧ ಸಿನಿಮಾ ರಂಗಗಳ ಮೇರುನಟರು ಅಭಿನಯಿಸಿದ್ದು, ಬಿಗ್ ಬಿ ಅಮಿತಾಬ್ ಬಚ್ಚನ್, ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ‘ಕಲ್ಕಿ’ ಸಿನಿಮಾದಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ ಕೂಡ ಅಭಿನಯಿಸಿದ್ದು, ಇದನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಫ್ಯಾನ್ಸ್ ಶಾಕ್‌ನಲ್ಲಿದ್ದಾರೆ. ದೃಶ್ಯವೊಂದರಲ್ಲಿ ಕಾಣಿಸಿಕೊಂಡಿರುವ ರಾಜಮೌಳಿ ಜೊತೆಗೆ ಪ್ರಭಾಸ್ ಮಾತನಾಡುತ್ತಾ, ‘ನಿನ್ನ ಕೈಗೆ ಸಿಕ್ಕಿದರೆ 5 ವರ್ಷ ನನ್ನ ಬಿಡಲ್ಲ’ ಎಂದು ರಾಜಮೌಳಿ ಅವರ ನಿಧಾನಗತಿಯ ನಿರ್ದೇಶನದ ಬಗ್ಗೆ ಹಾಸ್ಯ ಮಾಡಿದ್ದಾರೆ. ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.