ಕೊನೆಗೂ ATOM BOMB ಸಿಡಿಸಿದ ರಾಹುಲ್!

ನವದೆಹಲಿ: ಇತ್ತೀಚೆಗೆ ನಡೆದ ಚುನಾವಣೆಗಳ ಪ್ರಕ್ರಿಯೆ ಸಂಬಂಧ ಸಾಲುಸಾಲಾಗಿ ಸಂಶಯ ವ್ಯಕ್ತಪಡಿಸುತ್ತಿದ್ದ ಲೋಕಸಭಾ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಇಂದು ಕೊನೆಗೂ ಬಹುದೊಡ್ಡ ಆಟಂ ಬಾಂಬ್ ಸಿಡಿಸಿಬಿಟ್ಟಿದ್ದಾರೆ.

ನವದೆಹಲಿಯಲ್ಲಿ ವಿಶೇಷ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್, ಸಾಕಷ್ಟು ವಿಚಾರಗಳನ್ನು ಪ್ರಸ್ತಾಪಿಸಿ ಚುನಾವಣಾ ಆಯೋಗ ಹಾಗೂ ಬಿಜೆಪಿ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನು ದೇಶದ ಜನತೆ ಎದುರು ತೆರೆದಿಟ್ಟಿದ್ದಾರೆ.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಯಾವುದೇ ಸರ್ಕಾರ ಅಸ್ತಿತ್ವದಲ್ಲಿದ್ದರೂ ಒಂದೆರಡು ಅವಧಿಗೆ ಅಧಿಕಾರ ನಡೆಸಿದ ಬಳಿಕ ಆಡಳಿತ ವಿರೋಧಿ ಅಲೆ ಎದುರಾಗೇ ಆಗುತ್ತದೆ. ಆದರೆ ಬಿಜೆಪಿ ಬಹುತೇಕ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಸತತವಾಗಿ ಅಧಿಕಾರಕ್ಕೆ ಬರುತ್ತಿದೆ. ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೂ ಸಾಧ್ಯವಾಗದ ಈ ಅವಕಾಶ ಬಿಜೆಪಿಗೆ ಮಾತ್ರವೇ ಲಭ್ಯವಾಗುವುದು ಹೇಗೆ?

ಯಾವುದೇ ಚುನಾವಣೆಗೂ ಮುನ್ನ ಚುನಾವಣಾ ಪೂರ್ವ, ನಂತರ ಚುನಾವಣೋತ್ತರ ಸಮೀಕ್ಷೆಗಳು ನಡೆಯುತ್ತವೆ. ಸಮೀಕ್ಷೆಗಳಲ್ಲಿ ವಿಪಕ್ಷಗಳ ಗೆಲುವನ್ನು ಬಹುತೇಕವಾಗಿ ತಿಳಿಸಿರಲಾಗಿರುತ್ತದೆ. ಆದರೆ ಫಲಿತಾಂಶ ಪ್ರಕಟಗೊಂಡ ಬಳಿಕ, ಆಡಳಿತಾರೂಢ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಇದು ಹೇಗೆ ಸಾಧ್ಯ?

ಈ ಹಿಂದೆ ಬ್ಯಾಲಟ್ ಪೇಪರ್ ನಲ್ಲಿ ಮತದಾನ ಮಾಡುವ ವ್ಯವಸ್ಥೆ ಇದ್ದಾಗಲೇ ಸಾಕಷ್ಟು ಬಾರಿ ಲೋಕಸಭೆಗೆ ಒಂದೇ ದಿನದಲ್ಲಿ ಚುನಾವಣೆ ನಡೆಸಲಾಗುತ್ತಿತ್ತು. ಆದರೆ ಇತ್ತೀಚಿನ ಮೂರ್ನಾಲ್ಕು ಚುನಾವಣೆಗಳನ್ನು ತಿಂಗಳುಗಟ್ಟಲೆ ನಡೆಸಲಾಗಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿರುವ ಈಗ ತಿಂಗಳಾನುಗಟ್ಟಲೆ ಚುನಾವಣೆ ನಡೆಸುವುದು ಏಕೆ ಎಂಬ ಬಗ್ಗೆ ನಮಗೆ ಅನುಮಾನವಿದೆ ಎಂದಿದ್ದಾರೆ.

ಕಳೆದ ಮಹಾರಾಷ್ಟ್ರ ಚುನಾವಣೆ ವೇಳೆ 5 ವರ್ಷದಲ್ಲಿ ಸೇರದ ಮತದಾರರು, ಐದೇ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಆ ರಾಜ್ಯದ ಒಟ್ಟು ಜನಸಂಖ್ಯೆಗಿಂತ ಅಲ್ಲಿನ ಮತದಾರರ ಸಂಖ್ಯೆಯೇ ಹೆಚ್ಚಿದೆ. ಇದನ್ನು ನಂಬುವುದು ಹೇಗೆ?

ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ಇಡೀ ದಿನ ಮತದಾನ ಮಾಡದ ಜನ, ಸಂಜೆ 5.30ರ ಬಳಿಕ ಸಾಕಷ್ಟು ಮಂದಿ ಮತದಾನ ಮಾಡಿದ್ದಾರೆ ಎಂದು ಆಯೋಗವೇ ಹೇಳಿಕೆ ಬಿಡುಗಡೆ ಮಾಡಿದೆ. ಇದು ಹೇಗೆ ಸಾಧ್ಯ? ಚುನಾವಣಾ ಆಯೋಗವು ಬಿಜೆಪಿ ಜೊತೆ ಕೈಜೋಡಿಸಿ ಚುನಾವಣೆಯಲ್ಲಿ ಅಕ್ರಮ ಎಸಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನವೇ ನಮ್ಮ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಹಲವು ಸಂಶಯಾಸ್ಪದ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ನೀಡುವಂತೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದೆವು. ಅಲ್ಲದೆ ಪಕ್ಷದ ಹಲವು ನಾಯಕರ ನಿಯೋಗವನ್ನೂ ಚುನಾವಣಾ ಆಯೋಗದ ಬಳಿಗೆ ಕಳುಹಿಸಿಕೊಟ್ಟಿದ್ದೆವು. ಆದರೆ ಈ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಆಯೋಗದಿಂದ ಯಾವುದೇ ರೀತಿಯ ಪ್ರತ್ಯುತ್ತರ ಬಂದಿರಲಿಲ್ಲ. ಇಷ್ಟಾದರೂ ನಮ್ಮನ್ನು ಯಾರೂ ಭೇಟಿ ಮಾಡಿಲ್ಲ ಎಂದು ಆಯೋಗ ಹೇಳುತ್ತಿರುವುದು ಹಾಸ್ಯಪದ ಎಂದು ಲೇವಡಿ ಮಾಡಿದರು.

ಕೇವಲ 23000 ಮತಗಳು ಕಡಿಮೆ ಆಗಿದ್ದರಿಂದ ನಾವು ಹರಿಯಾಣದ 8 ಕ್ಷೇತ್ರಗಳಲ್ಲಿ ಸೋಲುಂಡು ಸರ್ಕಾರ ರಚಿಸುವ ಹಕ್ಕನ್ನು ಕಳೆದುಕೊಂಡೆವು ಎಂದು ನೋವನ್ನು ತೋಡಿಕೊಂಡರು.

ನಾವು ಚುನಾವಣಾ ಆಯೋಗದ ಬಳಿ ಮಿಷಿನ್ ರೀಡಿಬಲ್ ಎಲೆಕ್ಟ್ರಾನಿಕ್ ಡೇಟಾ ಒದಗಿಸುವಂತೆ ಕೇಳಿತ್ತಿದ್ದೇವೆ. ಆದರೆ ಮತದಾರರ ಪಟ್ಟಿ ನೀಡಲು ಆಯೋಗವು ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ಅಷ್ಟೇ ಅಲ್ಲ, ಚುನಾವಣೆ ಮುಗಿದ 45 ದಿನಗಳ ಬಳಿಕ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಆಯೋಗ ನಾಶಪಡಿಸಿದೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ 16 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿದ್ದವು. ಕೊನೆಗೆ ನಾವು ಕೇವಲ ಒಂಭತ್ತರಲ್ಲಿ ಗೆದ್ದೆವು. ಈ ಪೈಕಿ ಕಳೆದುಕೊಂಡ ಒಂದು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಶೀಲಿಸಲು ಸೂಚಿಸಿದೆವು. ಆದರೆ ನಮ್ಮ ಸಿಬ್ಬಂದಿ ಕಷ್ಟವಾಗುತ್ತದೆ ಎಂದಿದ್ದರು. ಹಾಗಾಗಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಮಾತ್ರವೇ ಆಯ್ದುಕೊಂಡೆವು. ಇದಕ್ಕಾಗಿ ನಮ್ಮ ಪಕ್ಷದ 40 ಮಂದಿ ಕಾರ್ಯಕರ್ತರು ಶ್ರಮಿಸಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಆ ದಾಖಲೆಗಳನ್ನು ಒಂದೆಡೆ ಸೇರಿಸಿ ಜೋಡಿಸಿದ್ದೇವೆ. ಅವು ಇದೀಗ ಮೂರು ಸಾಲುಗಳಲ್ಲಿದ್ದು, ಒಟ್ಟು ಏಳು ಅಡಿಯಷ್ಟಿವೆ. ಕೆಲ ದಾಖಲೆಗಳಲ್ಲಿ ನಕಲಿ ವಿಳಾಸ ನಮೂದಾಗಿದ್ದು, ಕೆಲ ಮತದಾರರ ಫೋಟೋಗಳೇ ಕಾಣೆಯಾಗಿವೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1,00,250 ಮತಗಳನ್ನು ಕಳವು ಮಾಡಲಾಗಿದೆ. ಈ ಪೈಕಿ 11,965 ನಕಲಿ ಮತದಾನವಾಗಿದ್ದು, 40,009 ಮತದಾರರ ಪಟ್ಟಿಯಲ್ಲಿ ನಕಲಿ ವಿಳಾಸ ಹಾಕಲಾಗಿದೆ. ಒಂದೇ ವಿಳಾಸದಲ್ಲಿ 10,452 ಮಂದಿ ಮತ ಚಲಾಯಿಸಿದ್ದಾರೆ. 4,132 ಮತದಾರರ ಗುರುತಿನ ಚೀಟಿಗಳಲ್ಲಿ ಮತದಾರರ ಮುಖ ಚಹರೆಯೇ ಇಲ್ಲ. ಫಾರ್ಮ್ 6 ದುರ್ಬಳಕೆ ಮಾಡಿಕೊಂಡು 33,692 ಮಂದಿ ಮೊದಲ ಬಾರಿ ಮತ ಚಲಾಯಿಸುತ್ತಿರುವ ಮತದಾರರೆಂದು ಗುರುತಿಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಇದರಲ್ಲಿ ಶಕುನ್ ರಾಣಿ ಹೆಸರಿನ 40 ವರ್ಷದ ಮಹಿಳೆಯೂ ಸೇರಿದ್ದಾರೆ ಎಂಬುದೇ ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದ ಎಲ್ಲೆಡೆ ನಡೆಯುವ ಎಲ್ಲಾ ಚುನಾವಣೆಗಳಲ್ಲೂ ಇದೇ ಆಗುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ 25 ಅಭ್ಯರ್ಥಿಗಳು ಕೇವಲ 33,000 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ನಮಗೆ ಮತದಾರರ ಪಟ್ಟಿ ಮತ್ತು ಮತಗಟ್ಟೆಯ ದೃಶ್ಯಾವಳಿಗಳು ಬೇಕಿದೆ. ಆದರೆ ಅವುಗಳನ್ನು ನಾಶ ಮಾಡುವಲ್ಲಿ ಕೇಂದ್ರ ಚುನಾವಣಾ ಆಯೋಗ ನಿರತವಾಗಿದೆ ಎಂದು ಕಿಡಿಕಾರಿದ್ದಾರೆ.

ನಾನು ಇಂದು ಬಿಡುಗಡೆ ಮಾಡಿರುವ ಈ ದಾಖಲೆಗಳು ಬುಲೆಟ್ ಪ್ರೂಫ್ ಎಂಬುದು ಬಿಜೆಪಿ ನಾಯಕರಿಗೆ ತಿಳಿದಿದೆ. ಹಾಗಾಗಿಯೇ ಅವರು ನನ್ನ ಮೇಲೆ ಅಟ್ಯಾಕ್ ಮಾಡಲು ಬರುತ್ತಿಲ್ಲ. ಮತಗಳನ್ನು ಕದ್ದು ಬ್ಲ್ಯಾಕ್ & ವೈಟ್ ಮಾಡಿದ್ದಾರೆ. ಮಾಧ್ಯಮಗಳನ್ನು ಬಳಸಿಕೊಂಡು ದೇಶದ ಜನರನ್ನು ಬಿಜೆಪಿ ನಾಯಕರು ಮೂರ್ಖರನ್ನಾಗಿಸುತ್ತಿದ್ದಾರೆ. ನಾವು ಸದ್ಯ ಆಗಿರುವ ಅಕ್ರಮದ ಬಗ್ಗೆ ತಿಳಿಸಿದ್ದು, ಇದಕ್ಕೆ ಉತ್ತರ ಸಿಗಬೇಕಿದೆ. ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೋ, ಮತ್ತೇನು ಮಾಡುತ್ತೇವೋ ಎಂಬುದು ಮುಂದಿನದು. ಇದೇ ವಿಚಾರ ಸಂಬಂಧ ಬೆಂಗಳೂರಿನಲ್ಲಿ ನಾಳೆ ಜಾಥಾ ನಡೆಯಲಿದ್ದು, ನಾಳೆ ಕಾಂಗ್ರೆಸ್ ಅಧ್ಯಕ್ಷರೂ ಭಾಗಿಯಾಗಲಿದ್ದಾರೆ ಎಂದು ತಿಳಿಸಿ ಸುದ್ದಿಗೋಷ್ಠಿಗೆ ರಾಹುಲ್ ವಿದಾಯ ಹೇಳಿದರು.

Leave a Reply

Your email address will not be published. Required fields are marked *