ಉತ್ತರ ಕೊರಿಯಾದಲ್ಲಿನ ಸಾರ್ವಜನಿಕರು ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಆದರೆ ಸಣ್ಣ ಸಣ್ಣ ತಪ್ಪುಗಳನ್ನೂ ದೊಡ್ಡವೆಂದು ಬಿಂಬಿಸಿ ಅಲ್ಲಿನ ನಾಗರಿಕರಿಗೆ ಶಿಕ್ಷೆ ವಿಧಿಸುತ್ತಿರುವುದು ಬಯಲಾಗುತ್ತಿದೆ.
ಹೌದು, ಉತ್ತರ ಕೊರಿಯಾ ಸರ್ಕಾರದ ನೀತಿ ಅನುಸರಿಸಲಾಗದೆ 649 ಮಂದಿ ದಕ್ಷಿಣ ಕೊರಿಯಾಗೆ ಪಲಾಯನಗೊಂಡಿದ್ದಾರೆ. ಇವರಿಂದ ದಕ್ಷಿಣ ಕೊರಿಯಾ ಸರ್ಕಾರವು ಅಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆಹಾಕಿದೆ.
ಆ ನಾಗರಿಕರು ನೀಡಿರುವ ಮಾಹಿತಿ ಪ್ರಕಾರ, 22 ವರ್ಷದ ಯುವಕನೋರ್ವ ದಕ್ಷಿಣ ಕೊರಿಯಾದ 70 ಹಾಡುಗಳನ್ನು ಕೇಳಿದ್ದ, ಮೂರು ಸಿನಿಮಾಗಳನ್ನು ನೋಡಿದ್ದ. ಅಷ್ಟೇ ಅಲ್ಲ, ಅವುಗಳನ್ನು ತನ್ನ ಸಂಗಡಿಗರಿಗೂ ಹಂಚಿದ್ದ. ಇದನ್ನೇ ಗಂಭೀರವಾಗಿ ಪರಿಗಣಿಸಿದ ಸರ್ಕಾವಧಿಕಾರಿ ಸರ್ಕಾರ, ಆ ಯುವಕನನ್ನು 2022ರಲ್ಲೇ ಸಾರ್ವಜನಿಕವಾಗಿ ಗಲ್ಲಿಗೇರಿಸಿತು ಎಂಬ ವಿಷಯ ತಿಳಿದುಬಂದಿದೆ.
ದಕ್ಷಿಣ ಕೊರಿಯಾ ಸರ್ಕಾರವು ಉತ್ತರ ಕೊರಿಯಾದ 2024ರ ಮಾನವ ಹಕ್ಕುಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಬಗ್ಗೆ ಉಲ್ಲೇಖಿಸಿದೆ. ಇದು ಆ ದೇಶದಲ್ಲಿರುವ ಕರಾಳತೆಯನ್ನು ಬಿಂಬಿಸುತ್ತದೆ.