ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ಖಾಲಿ ಇದ್ದ ಸೈಟುಗಳ ಪೈಕಿ 14 ಅನ್ನು ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ವರದಿಯಾಗಿದೆ.
ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ್ 3.16 ಎಕರೆ ಭೂಮಿಯನ್ನು ಕುಂಕುಮ ಭಾಗ್ಯ ಎಂಬಂತೆ ನೀಡಿದ್ದರು. ಈ ಜಾಮೀನು ದೇವನೂರು ಬಳಿ ಇತ್ತು. ಇದನ್ನು ಸೈಟ್ ಮಾಡುತ್ತೇವೆ ಎಂದು ಡಿನೋಟಿಫಿಕೇಶನ್ ಹೊರಡಿಸಿದ್ದ ಮುಡಾ, 1995ರಲ್ಲಿ ವಶಕ್ಕೆ ಪಡೆದಿತ್ತು. ಇದಕ್ಕೆ ಬದಲಾಗಿ ಪಾರ್ವತಿ ಅವರಿಗೆ ವಿಜಯನಗರ ಬಡಾವಣೆಯಲ್ಲಿ ಸೈಟುಗಳನ್ನು ನೀಡಲಾಗಿದೆ. ಇವುಗಳನ್ನು ಕಳೆದ ಬಿಜೆಪಿ ಸರ್ಕಾರವಿದ್ದ ವೇಳೆ 2021ರಲ್ಲಿ ಹಂಚಿಕೆ ಮಾಡಲಾಗಿದೆ.
ದೇವನೂರಿನಲ್ಲೇ ಸಾಕಷ್ಟು ಸೈಟುಗಳು ಖಾಲಿ ಇದ್ದರೂ ಪಾರ್ವತಿ ಅವರಿಗೆ ವಿಜಯನಗರ ಬಡಾವಣೆಯಲ್ಲಿ ಸೈಟುಗಳನ್ನು ನೀಡಿದ್ದೇಕೆ ಎಂಬುದು ಸದ್ಯ ಪ್ರಶ್ನೆಯಾಗಿದೆ. ಇನ್ನು ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಮಗ್ರ ತನಿಖೆಗೆ ಆದೇಶಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಮತ್ತೊಂದೆಡೆ ಪಾರ್ವತಿ ಅವರ ಜಮೀನಿನ ಬೆಲೆ 55 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ ಮುಡಾ ನೀಡಿರುವ ನಿವೇಶನದ ಬೆಲೆ ಕೇವಲ 15 ಕೋಟಿ ಮಾತ್ರ ಎಂದು ಸಿದ್ದರಾಮಯ್ಯ ಬೆಂಬಲಿಗರು ವಾದಿಸುತ್ತಿದ್ದಾರೆ.