ಮೈಸೂರು: ಮಗನ ಅಗಲಿಕೆಯನ್ನು ಮರೆಯಲಾಗದೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೂರ್ಗಳ್ಳಿ ಎಂಬಲ್ಲಿ ನಿನ್ನೆ ನಡೆದಿದೆ.
ಮೃತ ಮಹಿಳೆಯನ್ನು ಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಮಹಿಳೆಯು ತಮ್ಮ ಪುತ್ರಿಯನ್ನು ರವಿಚಂದ್ರ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಅಳಿಯ ವರದಕ್ಷಿಣೆ ತರುವಂತೆ ಮಗಳಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ. ಕಳೆದ ಜೂ.೯ರಂದು ಪತ್ನಿ ಮೇಲೆ ರವಿಚಂದ್ರ ಹಲ್ಲೆ ನಡೆಸುತ್ತಿದ್ದುದನ್ನು ಪ್ರಶ್ನಿಸಲು ಭಾಗ್ಯಮ್ಮನ ಪುತ್ರ ಅಭಿಷೇಕ್ ಯತ್ನಿಸಿದ್ದ. ಈ ವೇಳೆ ಬಾವ ಮತ್ತು-ಬಾಮೈದನ ನಡುವೆ ವಾಗ್ವಾದ ನಡೆದು, ರವಿಚಂದ್ರನು ಅಭಿಷೇಕ್ ಗೆ ಚಾಕುವಿನಿಂದ ಇರಿದಿದ್ದ. ಈ ವೇಳೆ ಅಭಿಷೇಕ್ ಸ್ಥಳದಲ್ಲೇ ಕುಸಿದು ಬಿದ್ದು, ಮೃತಪಟ್ಟಿದ್ದ.
ದುರ್ವರ್ತನೆಯಿಂದ ಅಳಿಯ ಜೈಲುಪಾಲಾಗಿದ್ದು, ಅವನಿಂದಲೇ ಮಗನನ್ನು ಕಳೆದುಕೊಂಡಿದ್ದೇನೆ ಎಂಬ ನೋವಿನಿಂದ ಮಹಿಳೆ ನಿನ್ನೆ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಪರಿಣಾಮ ಮೃತೆಯ ಪುತ್ರಿ ಮತ್ತು ಪತಿ ಇದೀಗ ಒಬ್ಬಂಟಿಯಾಗಿದ್ದಾರೆ.