ಮಂಡ್ಯ: ಪತ್ನಿಯ ಸಾವಿನ ನೋವಿನಿಂದ ಹೊರ ಬರಲಾಗದೆ ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆಯಲ್ಲಿ ನಡೆದಿದೆ.
ಮೃತನನ್ನು 26 ವರ್ಷದ ಮೋಹನ್ ಎಂದು ಹೇಳಲಾಗಿದೆ. ಕಳೆದ ಮಂಗಳವಾರವಷ್ಟೇ ಮೃತನ ಪತ್ನಿ ಸ್ವಾತಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಪತಿ ಸೇರಿದಂತೆ ಆತನ ಕುಟುಂಬಸ್ಥರೆಲ್ಲರೂ ನಾಪತ್ತೆಯಾಗಿದ್ದರು. ಇದರಿಂದ ಕುಪಿತಗೊಂಡಿದ್ದ ಮಹಿಳೆಯ ಕುಟುಂಬಸ್ಥರು, ಪತಿಯ ಮನೆಗೆ ಬೆಂಕಿ ಹಚ್ಚಿದ್ದರು.
ಇನ್ನು ಈ ಎಲ್ಲಾ ಬೆಳವಣಿಗೆಗಳಿಂದ ತೀವ್ರ ಆತಂಕಕ್ಕೆ ಒಳಗಾದ ಪತಿ, ಇಂದು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಒಬ್ಬರ ಹಿಂದೊಬ್ಬರಂತೆ ಅಪ್ಪ-ಅಮ್ಮ ಇಬ್ಬರೂ ಕೊನೆಯುಸಿರೆಳೆದಿರುವ ಕಾರಣ ಒಂದೂವರೆ ವರ್ಷದ ಹೆಣ್ಣು ಮಗು ಸದ್ಯ ಅನಾಥವಾಗಿದೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.