2024-25ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಜು.23ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಲಿದ್ದಾರೆಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಫೆಬ್ರುವರಿಯಲ್ಲಿ ಬಜೆಟ್ ಅಧಿವೇಶನ ನಡೆದಿರಲಿಲ್ಲ. ಸದ್ಯ ಬಜೆಟ್ ಮಂಡನೆಯೊಂದಿಗೆ ಅಧಿವೇಶನ ಆರಂಭವಾಗಲಿದೆ. ಸಚಿವರು ಬೆಳಗ್ಗೆ ರಾಷ್ಟ್ರಪತಿಗಳಿಂದ ಅನುಮತಿ ಪಡೆದು, 11 ಗಂಟೆ ವೇಳೆಗೆ ಮಂಡಿಸಲಿದ್ದಾರೆ. ಅಂದಿನಿಂದ ಆ.12ರವರೆಗೆ ಬಜೆಟ್ ಅಧಿವೇಶನ ಮುಂದುವರಿಯಲಿವೆ ಎಂದು ಮಾಹಿತಿ ನೀಡಿದ್ದಾರೆ.
ವ್ಯಕ್ತಿಗತವಾಗಿ ಸಂಬಳ ಪಡೆಯುತ್ತಿರುವವರಿಗೆ ಈ ಬಜೆಟ್ ನಲ್ಲಿ ಸಿಹಿ ಸುದ್ದಿ ಸಿಗಲಿದ್ದು, ತೆರಿಗೆ ಪಾವತಿಗೆ ನಿಗದಿಪಡಿಸಿರುವ ಕನಿಷ್ಠ ಆದಾಯದ ಮೊತ್ತವನ್ನು 50 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಹೆಚ್ಚಳ ಮಾಡುವ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗುತ್ತಿದೆ.ಇದಲ್ಲದೆ ಮನೆ ಕಟ್ಟಲೆಂದು ಸಾಲ ಮಾಡಿರುವವರಿಗೆ, ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವವರಿಗೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ಘೋಷಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.