ರವೆ ಉಂಡೆಯನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಅಲ್ಲದೆ ವರಮಹಾಲಕ್ಷ್ಮಿ, ಗಣೇಶ ಚತುರ್ಥಿ ಇನ್ನಿತರೆ ಹಬ್ಬಗಳನ್ನು ರವೆ ಉಂಡೆ ಮಾಡಿ, ದೇವರ ಮುಂದೆ ಪ್ರಸಾದ ಇಡುವುದು, ಇದನ್ನೇ ಭಕ್ತರಿಗೂ ಪ್ರಸಾದವನ್ನಾಗಿ ಹಂಚುವುದು ಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ವಾಡಿಕೆ ಇದೆ. ಹಾಗಾದರೆ ಎಲ್ಲರೂ ಇಷ್ಟಪಡುವ ಈ ರುಚಿಕರವಾದ ರವೆ ಉಂಡೆಯನ್ನು ಮನೆಯಲ್ಲೇ, ಸುಲಭವಾಗಿ ತಯಾರಿಸುವ ವಿಧಾನ ಯಾವುದು?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು, ಬಿಸಿಯಾಗುತ್ತಿದ್ದಂತೆ ಸ್ವಲ್ಪ ತುಪ್ಪ ಹಾಕಿ ಒಣ ದ್ರಾಕ್ಷಿ, ಗೋಡಂಬಿ ಹಾಗೂ ಇನ್ನಿತರೆ ಡ್ರೈ ಫ್ರೂಟ್ಸ್ ಹಾಕಿ ಕರಿದು ಪಕ್ಕಕ್ಕಿಟ್ಟುಕೊಳ್ಳಿ. ಅದೇ ಬಾಣಲೆಗೆ ಮತ್ತೆ ಸ್ವಲ್ಪ ತುಪ್ಪ ಹಾಕಿ ಅಗತ್ಯಕ್ಕೆ ತಕ್ಕಷ್ಟು ರವೆ ಹಾಕಿ ಉರಿದು ಅದನ್ನೂ ಸೈಡಿನಲ್ಲಿಡಿ. ಈಗ ಮತ್ತದೇ ಬಾಣಲೆಗೆ ಮತ್ತೂ ಸ್ವಲ್ಪ ತುಪ್ಪ ಹಾಕಿ ತೆಂಗಿನಕಾಯಿ ತುರಿ ಹಾಕಿ ಸ್ವಲ್ಪ ಬೆಚ್ಚನೆ ಮಾಡಿಕೊಂಡು ಪಕ್ಕಕ್ಕಿಡಿ.
ಈಗ ಮಿಕ್ಸಿ ಜಾರಿಗೆ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿ ನುಣುಪಾಗಿ ರುಬ್ಬಿಕೊಂಡು ಮತ್ತೊಂದು ಪಾತ್ರೆ ಅಥವಾ ಎಲ್ಲಾ ಕಚ್ಚಾವಸ್ತು ಸಿದ್ಧಪಡಿಸಿಕೊಂಡ ಬಾಣಲೆಗೆ ಹಾಕಿ. ಇದರ ಮೇಲೆ ಉರಿದುಕೊಂಡ ರವೆ, ಕರಿದ ಡ್ರೈ ಫ್ರೂಟ್ಸ್, ತುಪ್ಪ ಮಿಶ್ರಿತ ತೆಂಗಿನ ತುರಿ, ಮತ್ತೆ ಸ್ವಲ್ಪ ತುಪ್ಪ, ಏಲಕ್ಕಿ ಪುಡಿಯನ್ನು ಹಾಕಿ, ಅಗತ್ಯ ಎನಿಸುವಷ್ಟು ಹಾಲನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಉಂಡೆ ಕಟ್ಟಿಕೊಳ್ಳಿ.
ಇದನ್ನು ಕನಿಷ್ಠ ೨೦ ರಿಂದ ೩೦ ದಿನಗಳವರೆಗೆ ಶೇಖರಿಸಿಟ್ಟು ನಿತ್ಯವೂ ಇಷ್ಟ ಬಂದಾಗಲೆಲ್ಲಾ ಸವಿಯುತ್ತಿರಿ. ಆದರೆ ಮಧುಮೇಹದಿಂದ ಬಳಲುತ್ತಿರುವವರು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ರವೆ ಉಂಡೆ ಮೇಲೆ ಕಣ್ಣಾಯಿಸಿ. ಏಕೆಂದರೆ ಆರೋಗ್ಯವಿದ್ದರೆ ಜೀವನ, ಜೀವನವಿದ್ದರೆ ಪದಾರ್ಥ ಎಂಬುದನ್ನು ಮರೆಯಬೇಡಿ.