ತಮಿಳುನಾಡು: ಪೋಷಕರು ತಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಪರಸ್ಪರವಾಗಿ ತಬ್ಬಿಕೊಂಡು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಡೆಂಕಣಿಕೋಟೆಯ ಗೌತಾಲಂ ಎಂಬಲ್ಲಿ ನಡೆದಿದೆ.
ಮೃತ ಪ್ರೇಮಿಗಳನ್ನು ಗೌತಾಲಂ ಗ್ರಾಮದ ನರಸಿಂಹಮೂರ್ತಿ(22) ಹಾಗೂ ಬಾಚಪ್ಪನಟ್ಟಿ ನಿವಾಸಿ ಯುವಶ್ರೀ(17) ಎಂದು ಗುರುತಿಸಲಾಗಿದೆ. ಪ್ರಿಯಕರನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರಿಯತಮೆ ಕೃಷ್ಣಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು ಎಂದು ಹೇಳಲಾಗಿದೆ.

ಇನ್ನು ಇಬ್ಬರ ಪ್ರೀತಿ ವಿಚಾರ ಯುವತಿಯ ಮನೆಯವರಿಗೆ ತಿಳಿಯುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಯುವಕ ನಮ್ಮ ಹುಡುಗಿಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಪೋಕ್ಸೋ ಕಾಯಿದೆ ಅಡಿಯಲ್ಲಿ ದೂರು ಕೂಡ ದಾಖಲಿಸಿದ್ದರು. ಪರಿಣಾಮ ಯುವಕ ಜೈಲುಪಾಲಾಗಿದ್ದ. ಕಳೆದ 10 ದಿನಗಳ ಹಿಂದಷ್ಟೇ ಹೊರಬಂದಿದ್ದ ಪ್ರಿಯಕರ ಮತ್ತೆ ಪ್ರಿಯತಮೆಯನ್ನು ಸಂಪರ್ಕಿಸಿದ್ದ. ನಿನ್ನೆ ಯುವತಿಯು ಕಾಲೇಜಿನಿಂದ ನೇರವಾಗಿ ಪ್ರಿಯತಮನ ಮನೆಗೆ ಬಂದಿದ್ದಳು. ಈ ವೇಳೆ, ಇಬ್ಬರೂ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಮಾನಗೊಂಡು ಮನೆಯವರು ಬಾಗಿಲು ಒಡೆದಾಗ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.