ಬೆಂಗಳೂರು: ಗೃಹಲಕ್ಷಿ ಯೋಜನೆ ಅಡಿಯ ಫಲಾನುಭವಿಗಳಿಗೆ ಇಂದು ಅಥವಾ ನಾಳೆ ಮೇ ಮತ್ತು ಜೂನ್ ತಿಂಗಳ ಬಾಕಿ ಸಹಾಯಧನವನ್ನು ಒಟ್ಟಿಗೆ ಪಾವತಿ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾತನಾಡಿದ ಸಚಿವರು, ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವುದಿಲ್ಲ. ಐದೂ ವರ್ಷವೂ ಸಹಾಯಧನ ಪಾವತಿಸಲಾಗುತ್ತದೆ. ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಮಾತು ಮುಂದುವರೆಸಿದ ಸಚಿವರು, ಈ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದರೂ ಹಣ ಪಾವತಿಯಾಗುತ್ತಿಲ್ಲ ಎಂದಾದರೆ ಇ-ಕೆವೈಸಿ ಸಮಸ್ಯೆ ಇರುತ್ತದೆ. ಹಾಗಾಗಿ ಅಂತಹ ಫಲಾನುಭವಿಗಳು ಬ್ಯಾಂಕ್ ಗಳಿಗೆ ಭೇಟಿ ನೀಡಿ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಬೇಕು. ನಂತರ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಅಪ್ ಡೇಟ್ ಮಾಡಿಸಬೇಕು. ತರುವಾಯ ದಾಖಲಾತಿಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದಲ್ಲಿ ಸಹಾಯಧನ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಐದೂ ಗ್ಯಾರಂಟಿ ಯೋಜನೆಗಳನ್ನೂ ಸಮರ್ಪಕವಾಗಿ ಜಾರಿಗೊಳಿಸುತ್ತೇವೆಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಅದರಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ಪರಿಣಾಮ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ೧೮ ವರ್ಷ ಪೂರೈಸಿದ, ಪ್ರತೀ ಮನೆಯ ಯಜಮಾನಿಯೊಬ್ಬರಿಗೆ ತಿಂಗಳಿಗೆ ೨೦೦೦ ರೂ. ಸಹಾಯಧನವನ್ನು ಪಾವತಿಸಲಾಗುತ್ತಿದೆ.
ಗೃಹಲಕ್ಷ್ಮಿ ಸಹಾಯಧನ ಕೂಡಿಟ್ಟುಕೊಂಡು ಕೆಲ ಮಹಿಳೆಯರು ಸ್ವಂತ ಶೌಚಾಲಯ ಕಟ್ಟಿಸಿಕೊಂಡಿದ್ದರೆ, ಇನ್ನೂ ಕೆಲವರು ಕುಟುಂಬ ನಿರ್ವಹಣೆಯ ಸಹಾಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ತುಮಕೂರಿನ ಓರ್ವ ಮಹಿಳೆ ಯೋಜನೆ ಅಡಿಯಲ್ಲಿ ಬಂದ ಹಣದಿಂದ ತಮ್ಮ ಮಗಳಿಗೆ ಕಂಪ್ಯೂಟರ್ ಕೊಡಿಸಿದ್ದರು. ಮತ್ತೋರ್ವ ಮಹಿಳೆ ಗ್ರಾಮದ ಶಾಲೆಯ ಅಭಿವೃದ್ಧಿಗಾಗಿ ದೇಣಿಗೆ ನೀಡಿದ್ದರು.