ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್ ಎಫ್ ಪೇದೆ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಸಂಬಂಧ ಸ್ಪಷ್ಟನೆ ನೀಡಿರುವ ಇಲಾಖೆ, ನಟಿಗೆ ಕಪಾಳಮೋಕ್ಷ ಮಾಡಿದ್ದರಿಂದ ಮಹಿಳಾ ಪೇದೆಯನ್ನು ಬಂಧಿಸಲಾಗಿದ್ದು, ಈಗಲೂ ಬಂಧನದಲ್ಲಿದ್ದಾರೆ. ಅಲ್ಲದೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು, ಅದೂ ಕೂಡ ಮುಂದುವರಿದಿದೆ. ಅವರು ಸೇವೆಗೆ ಮರು ಸೇರ್ಪಡೆ ಆಗದ ಕಾರಣ ಅವರನ್ನು ಎಲ್ಲಿಗೂ ವರ್ಗಾವಣೆ ಮಾಡಿಲ್ಲವೆಂದು ಸ್ಪಷ್ಟನೆ ನೀಡಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಖಾಲಿಸ್ತಾನಿ ಬೆಂಬಲಿಗರು ಎಂದು ಆರೋಪಿಸಲಾಗಿತ್ತು. ಈ ಕುರಿತು ಹೇಳಿಕೆ ನೀಡುವಾಗ ಕಂಗನಾ ಮಹಿಳಾ ಪ್ರತಿಭಟನಾಕಾರರನ್ನು ತಪ್ಪಾಗಿ ಅಂದಾಜಿಸಿದ್ದರು. ಈ ಹಿನ್ನೆಲೆಯಲ್ಲಿ ಪೇದೆ ನಟಿಗೆ ಕಪಾಳಮೋಕ್ಷ ಮಾಡಿದ್ದರು.