ರಾಜೀನಾಮೆ ಬಳಿಕ ರಾಜಣ್ಣ ಫಸ್ಟ್ ರಿಯಾಕ್ಷನ್

ಬೆಂಗಳೂರು: ನನ್ನ ರಾಜೀನಾಮೆ ಹಿಂದೆ ಬಹುದೊಡ್ಡ ಷಡ್ಯಂತ್ರ, ಪಿತೂರಿ ನಡೆದಿದ್ದು, ಆ ಬಗ್ಗೆ ಮುಂದಿನ ದಿನಗಳಲ್ಲಿ ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾನು ಮಾಜಿ ಸಚಿವನಾಗಿ ಮಾತನಾಡುತ್ತಿದ್ದೇನೆ. ‘ಮಾಜಿ ಸಚಿವ’ ಎಂದು ಕರೆಸಿಕೊಳ್ಳಲು ನನಗೆ ಸಂತೋಷವಿದೆ. ನನ್ನ ರಾಜೀನಾಮೆ ಬಗ್ಗೆ ಸಿಎಂ ಮಾತನಾಡುತ್ತಾರೆ ಎಂದುಕೊಂಡಿದ್ದೆ, ಆದರೆ ಅವರು ಮಾತನಾಡಲಿಲ್ಲ. ಹಾಗಾಗಿ ಗೊಂದಲ ಆಗುವುದು ಬೇಡವೆಂದು ಖುದ್ದು ನಾನೇ ಮಾತನಾಡುತ್ತಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರು ಸಿಎಂ ಗಾದಿಯಲ್ಲಿ ಮುಂದುವರಿಯಬೇಕೆಂದು ಹೇಳುವವರಲ್ಲಿ ನಾನು ಮೊದಲಿಗ. ನನಗೆ ಸಚಿವ ಸ್ಥಾನ ನೀಡಿದ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ.

ನಮ್ಮ ನಾಯಕ ರಾಹುಲ್ ಗಾಂಧಿಯವರು. ಅವರು ಸದ್ಯ ರಾಷ್ಟ್ರ ಮಟ್ಟದ ನಾಯಕರಾಗಿದ್ದು, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಅವರ ಅಣತಿಯಂತೆಯೇ ನಾನು ರಾಜೀನಾಮೆ ನೀಡಿದ್ದೇನೆ. ಆದರೆ ಕೆಲವರು ಅವರಿಗೆ ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಕೆಲ ಹಿರಿಯ ನಾಯಕರೊಂದಿಗೆ ದೆಹಲಿಗೆ ತೆರಳಿ, ಅವರಲ್ಲಿರುವ ತಪ್ಪು ಗ್ರಹಿಕೆಯನ್ನು ದೂರ ಮಾಡುವ ಪ್ರಯತ್ನ ಮಾಡುತ್ತೇನೆ. ಅವರ ಮತಗಳ್ಳತನ ಅಭಿಯಾನಕ್ಕೂ ನಮ್ಮ ಬೆಂಬಲವಿದೆ ಎಂದಿದ್ದಾರೆ.

ರಾಜಣ್ಣ ಅವರಿಗೆ ಸಚಿವರಾದ ಚೆಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರೆ ರಾಜ್ಯ ನಾಯಕರು ಸಾಥ್ ನೀಡಿದ್ದರು.

ಕೇಂದ್ರ ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ್ದ ಮತಗಳ್ಳತನ ಆರೋಪ ಸರಿಯಲ್ಲ. ಆ ಸಂದರ್ಭದಲ್ಲಿ ನಮ್ಮದೇ ಸರ್ಕಾರವಿತ್ತು. ನಮ್ಮ ಅಧಿಕಾರಿಗಳೇ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಅರ್ಥದಲ್ಲಿ ರಾಜಣ್ಣ ಹೇಳಿಕೆ ನೀಡಿದ್ದರು. ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ನಲ್ಲಿ ಕ್ರಾಂತಿ ಆಗಲಿದೆ ಎಂದೂ ಹೇಳಿದ್ದರು. ಪಕ್ಷಕ್ಕೆ ಮುಜುಗರವಾಗುವ ಹೇಳಿಕೆ ನೀಡುತ್ತಿದ್ದುದರಿಂದ ಮೊದಲ ಕ್ರಮವಾಗಿ ಹಾಸನ ಉಸ್ತುವಾರಿ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದ ಹೈಕಮಾಂಡ್, ಇಂದು ರಾಜಣ್ಣ ಅವರಿಂದ ಸಚಿವ ಸ್ಥಾನಕ್ಕೂ ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *