ಬೆಂಗಳೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಪತ್ರವನ್ನು ಸಚಿವರು ಸಲ್ಲಿಸಿರುವ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಇಂದಿನಿಂದ ವಿಧಾನ ಮಂಡಳ ಅಧಿವೇಶನ ಆರಂಭವಾಗಿದ್ದು, ಖುದ್ದು ರಾಜಣ್ಣ ಅವರೂ ಕೂಡ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಈ ವೇಳೆ, ರಾಜಣ್ಣ ಅವರನ್ನು ಕಂಡ ವಿಪಕ್ಷ ನಾಯಕ ಆರ್.ಅಶೋಕ್, ತಾವು ಸಚಿವರಾಗಿ ಸದನಕ್ಕೆ ಬಂದಿದ್ದೀರೋ ಅಥವಾ ಶಾಸಕರಾಗಿ ಬಂದಿದ್ದೀರೋ ಎಂದು ಪ್ರಶ್ನಿಸಿದ್ದಾರೆ.
ಅಶೋಕ್ ಮಾತಿಗೆ ಕೆರಳಿದ ರಾಜಣ್ಣ, ನಾನು ರಾಜೀನಾಮೆ ಕೊಟ್ಟಿದ್ದೇನೋ, ಬಿಟ್ಟಿದ್ದೆನೋ ಅಥವಾ ರಾಜೀನಾಮೆ ನೀಡಿ ಎಂದು ನನ್ನನ್ನು ಯಾರು ಕೇಳಿದ್ದಾರೆ ಎಂಬುದೂ ಬೇರೆ ಮಾತು. ನನ್ನ ರಾಜೀನಾಮೆ ಸಂಬಂಧ ಈಗಾಗಲೇ ಸಂಸದೀಯ ಸಚಿವರು ಹೇಳಿಕೆ ನೀಡಿದ್ದಾರೆ. ಇದೇ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಅವರೂ ಕೂಡ ಸದನಕ್ಕೆ ಆಗಮಿಸಿ ಮಾತನಾಡಲಿದ್ದಾರೆ. ಆದರೆ ವಿಪಕ್ಷ ನಾಯಕರಾಗಿ ನೀವು ಇಷ್ಟು ಕೀಳು ಮಟ್ಟಕ್ಕೆ ಇಳಿದು ಮಾತನಾಡಬಾರದು ಎಂದು ಕಿಡಿಕಾರಿದ್ದಾರೆ.
ರಾಜಣ್ಣ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ಸ್ವೀಕರಿಸಿ, ಅಂಗೀಕರಿಸಿದ್ದು, ರಾಜ್ಯಪಾಲರಿಗೆ ಕೆಲವೇ ಕ್ಷಣಗಳಲ್ಲಿ ಕಳುಹಿಸಿಕೊಡಲಿದ್ದಾರೆ ಎನ್ನಲಾಗುತ್ತಿದೆ.
ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡುತ್ತಿದ್ದ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ್ದ ರಾಜಣ್ಣ, ಮುಂದಿನ ಅಕ್ಟೋಬರ್ ಅಥವಾ ನವಂಬರ್ ತಿಂಗಳಿನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿಯೇ ಆಗಲಿದೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಖುದ್ದು ರಾಹುಲ್ ಅವರೇ ರಾಜೀನಾಮೆ ನೀಡುವಂತೆ ರಾಜಣ್ಣ ಅವರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜಣ್ಣ ದಿಢೀರ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿದ್ದು, ಕೆಲವೊಮ್ಮೆ ಪಕ್ಷ ವಿರೋಧಿಯಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ. ಹಾಗಾಗಿ ಅವರಿಂದ ರಾಜೀನಾಮೆ ಪಡೆಯಬೇಕೆಂದು ಕೆಲ ಶಾಸಕರು ದೂರು ನೀಡಿದ್ದರು. ಇದಾದ ಬಳಿಕ ರಾಜಣ್ಣ ಅವರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರೂ ಮುಖಾಮುಖಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ನಂತರ ಹಾಸನ ಉಸ್ತುವಾರಿ ಸಚಿವ ಸ್ಥಾನದಿಂದ ರಾಜಣ್ಣ ಅವರನ್ನು ಕೆಳಗಿಳಿಸಿ, ಆ ಜವಾಬ್ದಾರಿಯನ್ನು ಕೃಷ್ಣಭೈರೇಗೌಡ ಅವರಿಗೆ ವಹಿಸಲಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ರಾಜೀನಾಮೆ ಅಂಗೀಕಾರವಾಗಿದೆ.