ವೈಯಕ್ತಿಕ ಸುರಕ್ಷತೆ ಮತ್ತು ಭಾವನಾತ್ಮಕ ಆರೋಗ್ಯದ ದೃಷ್ಟಿಯಿಂದ ಮಕ್ಕಳಿಗೆ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ತಿಳಿಸುವುದು ಅತ್ಯಗತ್ಯವಾಗಿದೆ. ಪೋಷಕರು, ಶಿಕ್ಷಕರು ಹಾಗೂ ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಸ್ಪಷ್ಟ ಮಾರ್ಗದರ್ಶನವನ್ನು ನೀಡಲಾಗಿದೆ:
1. ಸರಳ ಭಾಷೆ ಬಳಸಿ:
- ಎದೆ, ಖಾಸಗಿ ಅಂಗ ಸೇರಿದಂತೆ ಎಲ್ಲಾ ಪದಗಳನ್ನೂ ಸರಳವಾಗಿ ಬಳಸಿ, ಶಾಂತವಾಗಿ ಉಲ್ಲೇಖಿಸಿ.
- ಅರ್ಥವಿಲ್ಲದ ಮಾತುಗಳನ್ನು ಬಳಸಬೇಡಿ. ಏಕೆಂದರೆ ಮಾತಿನಲ್ಲಿ ಸ್ಪಷ್ಟತೆ ಇರಬೇಕಿರುವುದು ಮುಖ್ಯ.
2. Body ownership ಬಗ್ಗೆ ಅರಿವು ಮೂಡಿಸಿ:
- ಹೀಗೆ ಹೇಳಿ: “ನಿನ್ನ ದೇಹ ನಿನ್ನದೇ.”
- “ಅನುಮತಿಯಿಲ್ಲದೆ ಯಾರೂ ನಿನ್ನನ್ನು ಸ್ಪರ್ಶಿಸಲು ಹಕ್ಕಿಲ್ಲ. ಆತ ತಮ್ಮನಾಗಿದ್ದರೂ ಕೂಡ.”
3. ಸ್ಪರ್ಶದ ಪ್ರಕಾರಗಳನ್ನು ವಿವರಿಸಿ:
- ಸುರಕ್ಷಿತ ಸ್ಪರ್ಶ: ಮಮತೆ & ಕಾಳಜಿ ತೋರಿಸುವ ಸ್ಪರ್ಶದ ಬಗ್ಗೆ ತಿಳಿಸಿ. (ಉದಾ: ತಾಯಿಯ ಅಪ್ಪುಗೆ)
- ಅಸುರಕ್ಷಿತ ಸ್ಪರ್ಶ: ನೋವು ನೀಡುವ ಅಥವಾ ಭಯ, ಗೊಂದಲ, ಅಸಹಜತೆಯನ್ನು ಉಂಟುಮಾಡುವ ಸ್ಪರ್ಶವೆಂದು ತಿಳಿಸಿ.
- ಗೌಪ್ಯ ಸ್ಪರ್ಶ: “ಇದನ್ನು ಯಾರಿಗೂ ಹೇಳಬೇಡ” ಎಂದು ಹೇಳಿ ಮಾಡುವ ಸ್ಪರ್ಶ. ಹೀಗೆ ಯಾರಾದರೂ ಹೇಳಿದರೆ ನನಗೆ ಹೇಳು ಎಂದು ಹೇಳಿಕೊಡಿ.
4. ‘ಅಂಡರ್‌ವೇರ್ ನಿಯಮ’ ಕಲಿಸಿ:
- ಖಾಸಗಿ ಅಂಗಗಳನ್ನು ಅಂಡರ್‌ವೇರ್‌ನಿಂದ ಮುಚ್ಚಿಕೊಳ್ಳಬೇಕು. ಇವನ್ನು ಯಾರೂ ನೋಡುವ ಅಥವಾ ಸ್ಪರ್ಶಿಸುವ ಹಕ್ಕಿಲ್ಲ. ಆದರೆ ಪೋಷಕರ ಸಮ್ಮುಖದಲ್ಲಿ ಡಾಕ್ಟರ್, ಅಗತ್ಯವಿರುವಾಗ ಪೋಷಕರು ಮಾತ್ರ ಮುಟ್ಟಬಹುದು ಎಂದು ತಿಳಿಸಿ.
5. “ಇಲ್ಲ” ಎಂಬುದನ್ನು ಕಲಿಸಿ:
- ಯಾರಾದರೂ ನಿನ್ನನ್ನು ಅಸುರಕ್ಷಿತವಾಗಿ ಮುಟ್ಟಿದರೆ ಜೋರಾಗಿ ನೋ ಎಂದು ಚೀರು, ಆ ಸ್ಥಳದಿಂದ ಓಡಿ ಹೋಗು ಅಥವಾ ನಂಬಿಕಸ್ಥ ಹಿರಿಯರಿಗೆ ಘಟನೆ ಬಗ್ಗೆ ವಿವರಿಸು ಎಂದು ಹೇಳಿಕೊಡಿ.
6. ನಾಟಕದ ಪಾತ್ರ ಅಥವಾ ಕಥೆಗಳನ್ನು ಬಳಸಿ ಹೇಳಿ:
- ಯಾರಾದರೂ ನಿನ್ನನ್ನು ಮುಟ್ಟಿ, ಯಾರಿಗೂ ಹೇಳಬೇಡ ಎಂದು ಗೌಪ್ಯವಾಗಿ ಹೇಳಿದರೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಕಥೆಗಳನ್ನು ಮತ್ತು ಅನಿಮೇಷನ್ ವಿಡಿಯೋಗಳನ್ನು ಬಳಸಿ ನಿಧಾನವಾಗಿ ವಿವರಿಸಿ.
- ಇಂತಹ ಕಥೆಗಳು ಅಥವಾ ವಿಡಿಯೋಗಳು ಮಕ್ಕಳಲ್ಲಿ ಗಂಭೀರವಾದ ಭಯವನ್ನು ಹುಟ್ಟಿಸದಿರಲಿ.
7. ನಂಬಲರ್ಹ ವಯಸ್ಕರನ್ನು ಗುರುತಿಸಲು ಸಹಾಯ ಮಾಡಿ:
- ಮಕ್ಕಳಿಗೆ ನಂಬಲರ್ಹವಾದ ಇಬ್ಬರು ಅಥವಾ ಮೂವರ ದೊಡ್ಡವರ ಪಟ್ಟಿಯನ್ನು ತಯಾರಿಸಲು ಸಹಾಯ ಮಾಡಿ. ಉದಾ: ತಾಯಿ, ಶಿಕ್ಷಕ, ಅತ್ತೆ, ಮಾವ.
8. ಕೆಟ್ಟ ಸ್ಪರ್ಶವನ್ನು ಗೌಪ್ಯವಾಗಿಡುವುದು ಒಳ್ಳೆಯದಲ್ಲ ಎಂದು ಹೇಳಿ:
- “ಯಾರಾದರೂ ನಿನ್ನನ್ನು ಸ್ಪರ್ಶಿಸಿ ‘ಇದನ್ನು ಹೇಳಬೇಡ’ ಅಂತ ಹೇಳಿದ್ರೆ, ನೀನು ಹೇಳಲೇಬೇಕು. ನಾವು ನಿನ್ನ ಮೇಲೆ ನಂಬಿಕೆ ಇಡ್ತೀವಿ.” ಎಂದು ದೃಢಪಡಿಸಿ.
9. ಪುನರಾವೃತ್ತಿ & ಪುನರ್ ದೃಢೀಕರಣ:
- ಮಕ್ಕಳಿಗೆ ಹೇಳಿಕೊಡುವ ಈ ಪಾಠಗಳು ನಿರಂತರವಾಗಿರಲಿ.
- ಮಕ್ಕಳ ವಯಸ್ಸು ಮತ್ತು ಮನಸ್ಥಿತಿಗೆ ಅನುಗುಣವಾಗಿ ಸಂದೇಶವನ್ನು ರೂಪಿಸಿ.