ಮರಣ ಶಾಸನ(Will) ಎಂದರೇನು?
ಯಾವುದೇ ಓರ್ವ ವ್ಯಕ್ತಿ ತನಗೆ ಸೇರಿದ ಚರಾಸ್ತಿ ಅಥವಾ ಸ್ಥಿರಾಸ್ತಿಯು ಇಂತಹ ನಿಗದಿತ ವ್ಯಕ್ತಿಗೇ ಸೇರಬೇಕೆಂದು ನಾಮವನ್ನು ಉಲ್ಲೇಖಿಸಿ ಬರೆಯುವ ಪತ್ರವಾಗಿರುತ್ತದೆ. ಇದು ನೋಂದಣಿ ಪತ್ರದಲ್ಲಿಯೇ ಇರಲಿ ಅಥವಾ ಬರೀ ಪತ್ರದಲ್ಲಿಯೇ ನಮೂದು ಮಾಡಿರಲಿ. ಅದಕ್ಕೆ ಮೌಲ್ಯ ಇದ್ದೇ ಇರುತ್ತದೆ.
ಈ ಮರಣ ಶಾಸನವನ್ನು ದೃಢಪಡಿಸುವುದು ಹೇಗೆ?
ಆಸ್ತಿಗೆ ಸಂಬಂಧಿಸಿದ ಮೃತನ ಕುಟುಂಬಸ್ಥರನ್ನು ಪ್ರತಿವಾದಿಗಳನ್ನಾಗಿಸಿ, ವಿಲ್ ನಲ್ಲಿ ಹೆಸರಿರುವ ವ್ಯಕ್ತಿಯು ಅದನ್ನು ಸಾಬೀತುಪಡಿಸಲು ದಾವೆ ಹೂಡಬಹುದು. ಇಲ್ಲವೇ, ವಿಲ್ ಪ್ರಕಾರ ಪ್ರತಿವಾದಿಗಳಾಗಲಿರುವವರೇ ಅದು ಸುಳ್ಳೆಂದು ಸಾಬೀತುಪಡಿಸಲು ಮೊಕದ್ದಮೆ ದಾಖಲಿಸಬಹುದು.
ಸಾಬೀತುಪಡಿಸುವುದು ಹೇಗೆ?
ವಿಲ್ ನಲ್ಲಿ ಉಲ್ಲಿಖಿತವಾಗಿರುವ ಹೆಸರಿನ ವ್ಯಕ್ತಿಯು ‘ತಾನು ಯಾವುದೇ ಬಲವಂತ ಮಾಡಿಲ್ಲ. ವಿಲ್ ಬರೆದ ಸಂದರ್ಭದಲ್ಲಿ ಅವರ ಮಾನಸಿಕ ಸ್ಥಿತಿ ಚೆನ್ನಾಗಿತ್ತು. ಬೇಕಿದ್ದರೆ ಆ ವಿಲ್ ಗೆ ಸಹಿ ಮಾಡಿದ್ದ ಇಬ್ಬರ ಅಭಿಪ್ರಾಯವನ್ನು ಪಡೆಯಬಹುದು’ ಎಂದು ನ್ಯಾಯಾಲಯಕ್ಕೆ ತಿಳಿಸಿ, ಸಾಕ್ಷಿಯಾಗಿ ಸಹಿ ಮಾಡಿರುವ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೇಳಿಕೆ ದಾಖಲಿಸಬಹುದು. ಒಂದು ವೇಳೆ ಸಾಕ್ಷಿದಾರ ಸಾವನ್ನಪ್ಪಿದ್ದರೆ, ಆತ ಸಹಿ ಹಾಕಿರುವ ಇತರೆ ದಾಖಲೆಗಳನ್ನು ತರುವ ಮೂಲಕ ಆತನ ಮಕ್ಕಳಿಂದಲೂ ಹೇಳಿಕೆ ಕೊಡಿಸಬಹುದು. ತರುವಾಯ ನ್ಯಾಯಾಲಯವು ಇತರೆ ದಾಖಲೆಯಲ್ಲಿನ ಸಹಿ ಮತ್ತು ವಿಲ್ ನಲ್ಲಿರುವ ವ್ಯಕ್ತಿಯ ಸಹಿಯನ್ನು ತಾಳೆ ಮಾಡಿನೋಡಿ, ಪರಿಣಿತರ ಅಭಿಪ್ರಾಯ ಪಡೆದು ತೀರ್ಪಿನ ಬಗ್ಗೆ ನಿರ್ಧರಿಸಲಿದೆ.
ಇನ್ನು ಪ್ರತಿವಾದಿಗಳು ನಮ್ಮ ಅಜ್ಜನ ಮನಸ್ಥಿತಿ ವಿಲ್ ಬರೆದ ಸಂದರ್ಭದಲ್ಲಿ ಸರಿ ಇರಲಿಲ್ಲವೆಂದೋ, ಬಲವಂತವಾಗಿ ಕರೆದುಕೊಂಡು ಹೋಗಿ ಬರೆಸಿಕೊಂಡಿದ್ದಾರೆಂದೋ, ಕುಡಿದ ಅಮಲಿನಲ್ಲಿ ಬರೆಸಿಕೊಂಡಿದ್ದಾರೆಂದೋ ವಾದಿಸಬಹುದು. ವಾದ-ಪ್ರತಿವಾದವನ್ನು ಆಲಿಸಲಿರುವ ನ್ಯಾಯಾಲಯವು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದೆ.
ಒಟ್ಟಾರೆ ವಿಲ್ ಬರೆದ ವ್ಯಕ್ತಿಯು ಮೃತಪಟ್ಟ ಬಳಿಕವೇ ವಿಲ್ ಜಾರಿಯಾಗುವ ಕಾರಣ, ಆತ ಮೃತಪಟ್ಟ ನಂತರವೇ ಇಂತಹ ಪ್ರಕರಣಗಳ ಬಗ್ಗೆ ದಾವೆ ಹೂಡಬೇಕಾಗುತ್ತದೆ.