ಮಕ್ಕಳು ಇಷ್ಟಪಡುವ ಕೊಬ್ಬರಿ ಮಿಠಾಯಿ ಮಾಡುವುದು ಹೇಗೆ?

ಮಕ್ಕಳು ಕೊಬ್ಬರಿ ಮಿಠಾಯಿಯನ್ನು ಸದಾ ಕಾಲ ಇಷ್ಟಪಡುತ್ತಿರುತ್ತಾರೆ. ಇದನ್ನು ಅಂಗಡಿಯಲ್ಲಿ ಖರೀದಿ ಮಾಡಿ ಕೊಡಿಸುವ ಬದಲು ಮನೆಯಲ್ಲೇ ಸುಲಭವಾಗಿ ತಯಾರಿಸಿ ಕೊಡಬಹುದು.

ಹೌದು, ಮೊದಲು ಇತ್ತೀಚಿನ, ಒಳ್ಳೆಯ 2 ತೆಂಗಿನ ಕಾಯಿಗಳನ್ನು ತೆಗೆದುಕೊಂಡು, ಒಡೆದು ಬಿಳಿ ಭಾಗವನ್ನಷ್ಟೇ ತುರಿದುಕೊಳ್ಳಿ. ಈಗ ಒಲೆ ಮೇಲೆ ಪಾತ್ರೆಯನ್ನಿಟ್ಟು ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿ ಅದಕ್ಕೆ ಅಗತ್ಯ ಎನಿಸುವಷ್ಟು ನೀರನ್ನು ಹಾಕಿ ಹದವಾದ ಪಾಕ ಮೂಡುವವರೆಗೆ ಕೈ ಆಡಿಸುತ್ತಾ, ಕಾಯಿಸಿ. ಸಕ್ಕರೆ ಕರಗಿ, ಅಂಟು ರೀತಿಯ ಪಾಕ ಸಿದ್ಧವಾದಾಗ ತುರಿದುಕೊಂಡ ತೆಂಗಿನಕಾಯಿಯನ್ನು ಹಾಕಿ. ನಂತರ ಸ್ವಲ್ಪ ತುಪ್ಪ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಕಾಯಿಸುತ್ತಾ ಇರಿ. ಕಾಯಿಸುವಾಗ ತೆಂಗಿನಕಾಯಿಯಲ್ಲಿ ಹಾಲಿನಂತಹ ದ್ರವ ಕಾಣಿಸಿಕೊಳ್ಳುತ್ತದೆ. ಈ ದ್ರವ ಆವಿಯಾಗುವವರೆಗೆ ಕೈಯಾಡಿಸುತ್ತಾ, ಕಾಯಿಸುತ್ತಿರಿ. ದ್ರವ ಆವಿಯಾಗಿ, ಉಂಡೆ ಕಟ್ಟುವ ಹಂತಕ್ಕೆ ಬಂದ ಬಳಿಕ ಕಾಯಿಯ ಮಿಶ್ರಣವನ್ನು ಕೆಳಗಿಳಿಸಿ.

ಕೂಡಲೇ ತಟ್ಟೆ ಅಥವಾ ಟ್ರೇಗೆ ಸ್ವಲ್ಪ ತುಪ್ಪ ಸವರಿ. ಅದಕ್ಕೆ ಬೇಯಿಸಿರುವ ಕಾಯಿಯ ಮಿಶ್ರಣವನ್ನು ಸುರಿದು ಹರಡಿ ಒಂದೆರಡು ನಿಮಿಷ ಆರಲು ಬಿಡಿ. ಗಟ್ಟಿಯಾಯಿತು ಎನಿಸಿದಾಗ ಚಾಕುವಿನಿಂದ ಅಚ್ಚು ಕುಯ್ದುಕೊಳ್ಳಿ. ಇದನ್ನು 20 ದಿನಗಳವರೆಗೆ ಶೇಖರಿಸಿ ಇಡಬಹುದಾಗಿದ್ದು, ಮಕ್ಕಳು ಅಂಗಡಿ ತಿಂಡಿಗಾಗಿ ಹಠ ಮಾಡಿದಾಗಲೆಲ್ಲಾ ಒಂದೊಂದೇ ಕೊಡಿ.

Leave a Reply

Your email address will not be published. Required fields are marked *