ಎಲ್ಲದಕ್ಕಿಂತ ಮೊಟ್ಟ ಮೊದಲು ಪಾತ್ರೆಯೊಂದಕ್ಕೆ ಸಿದ್ಧ ಮಟನ್ ಹಾಕಿ, ಅದಕ್ಕೆ ಅರಿಶಿನ ಮತ್ತು ಉಪ್ಪನ್ನು ಹಾಕಿ ಬೇಯಿಸಿಕೊಳ್ಳಿ. ಮತ್ತೊಂದು ಕಡೆ ಇನ್ನೊಂದು ಪಾತ್ರೆಯಲ್ಲಿ ಅಕ್ಕಿಯನ್ನು ತೊಳೆದು ನೆಸಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಪಾತ್ರೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಇದಕ್ಕೆ ಸಾಸಿವೆ, ಜೀರಿಗೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು ಮತ್ತು ಪಲಾವ್ ಎಲೆ ಎಲ್ಲವನ್ನೂ ಒಮ್ಮೆಲೇ ಹಾಕಿ ಕೈ ಆಡಿಸಿ. ಸ್ವಲ್ಪ ಸಮಯದ ನಂತರ ಮೀಡಿಯಂ ಆಗಿ ಹೆಚ್ಚಿಕೊಂಡ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಕೈಯಾಡಿಸುತ್ತಾ ಇರಿ. ತರುವಾಯ ಕೊತ್ತಂಬರಿ ಮತ್ತು ಪುದಿನ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ. ಈಗ ಬೇಯಿಸಿದ ಮಟನ್ ಅನ್ನು ಹಾಕಿ ಮತ್ತು ಈಗಲೂ ಸ್ವಲ್ಪ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಕೊಂಚ ಪೆಪ್ಪರ್ ಪೌಡರ್ ಹಾಕಿ ಸ್ವಲ್ಪ ಸಮಯದವರೆಗೆ ಫ್ರೈ ಮಾಡಿ. ನಂತರ ಒಂದು ಚಮಚ ಖಾರದ ಪುಡಿ, ಒಂದು ಚಮಚ ದನಿಯಾ ಪುಡಿ, ಅರ್ಧ ಚಮಚ ಬಿರಿಯಾನಿ ಮಸಾಲ ಹಾಕಿಕೊಂಡು ಫ್ರೈ ಮಾಡಿ. ಇದೀಗ ಒಂದು ಕಪ್ ಮೊಸರನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಬೆರೆಸಿ.
ಇದಾದ ತರುವಾಯ ಅಕ್ಕಿಗೆ ತಕ್ಕಷ್ಟು ಶುದ್ಧ ನೀರನ್ನು ಮತ್ತು ನೆನೆಸಿಟ್ಟ ಅಕ್ಕಿಯನ್ನೂ ಹಾಕಿ ಚೆನ್ನಾಗಿ ಬೇಯಲು ಬಿಡಿ. ೯೦% ಬೆಂದಿದೆ ಎನಿಸಿದಾಗ ಅನ್ನದ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿ, ಮೇಲೆ ಬಾಳೆ ಎಲೆಯಿಂದ ಮುಚ್ಚಿ ಮತ್ತೆ ಹದಿನೈದು ನಿಮಿಷ ಧಮ್ ಕಟ್ಟಿ. ಈಗ ರುಚಿಕರವಾದ ಮಟನ್ ಬಿರಿಯಾನಿ ಸವಿಯಲು ಸಿದ್ಧವಿದ್ದು, ತಟ್ಟೆಗೆ ಹಾಕಿಕೊಂಡು ಕುಟುಂಬಸ್ಥರೊಂದಿಗೆ ನೆಮ್ಮದಿಯಿಂದ ಸವಿಯಿರಿ.