ಮಾಜಿ ಪ್ರಧಾನಿ ಸಿಂಗ್ ವಿಧಿವಶ

ದೆಹಲಿ: ದೇಶವನ್ನು ಬೃಹತ್ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿ ಖ್ಯಾತ ಆರ್ಥಿಕ ತಜ್ಞ ಎನಿಸಿಕೊಂಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉಸಿರು ನಿಲ್ಲಿಸಿದ್ದಾರೆ.

1991ರ ಕೈಗಾರಿಕಾ ಕ್ರಾಂತಿ, ಉದ್ಯೋಗ ಖಾತರಿ ಯೋಜನೆ, ಮಾಹಿತಿ ಹಕ್ಕು ಕಾಯಿದೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಗಳ ಜಾರಿ ಸೇರಿದಂತೆ ಸಾಕಷ್ಟು ಹೆಗ್ಗಳಿಕೆಗಳಿಗೆ ಅವರು ಒಳಗಾಗಿದ್ದರು. ಇಂಥ ಮಹಾನ್ ನಾಯಕ ಇಂದು ದಿಢೀರ್ ಕಣ್ಮರೆಯಾಗಿದ್ದು, ದೇಶಾದ್ಯಂತ ಇರುವ ಅವರ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಪಕ್ಷದ ನಾಯಕರೂ ಅವರ ನಿಧನಕ್ಕೆ ಪಕ್ಷಾತೀತವಾಗಿ ಕಂಬನಿ ಮಿಡಿಯುತ್ತಿದ್ದಾರೆ.

ಸಿಂಗ್ 1932ರ ಸೆ.26ರಂದು ಪಾಕಿಸ್ತಾನದಲ್ಲಿರುವ ಪಶ್ಚಿಮ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ್ದರು. ದೇಶ ಇಬ್ಭಾಗ ಆದಾಗ ಇವರ ಕುಟುಂಬಸ್ಥರು ಭಾರತಕ್ಕೆ ವಲಸೆ ಬಂದಿದ್ದರು.

ಸಿಂಗ್ ಅವರ ಸಾಧನೆ & ಕೊಡುಗೆಗಳು..

ಆಕ್ಸ್ ಫರ್ಡ್ ವಿವಿಯಲ್ಲಿ ಪಿಹೆಚ್ಡಿ ಮಾಡಿದ್ದ ಮನಮೋಹನ್ ಸಿಂಗ್ ಅವರು ಆರಂಭದಲ್ಲಿ ಪಂಜಾಬ್ ವಿವಿಯಲ್ಲಿ ಹಿರಿಯ ಪ್ರಾಧಾಪಕರಾಗಿ ಸೇವೆ ಸಲ್ಲಿಸಿದ್ದರು. ನಂತರದ ದಿನಗಳಲ್ಲಿ ದೆಹಲಿ ವಿವಿಯಲ್ಲೂ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ರೀಡರ್ ಆಗಿ ಹಾಗೂ 1991ರಲ್ಲಿ ವಿಶ್ವ ವಿದ್ಯಾಲಯಗಳ ಧನ ಸಹಾಯ ಆಯೋಗದ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದರು. 1966ರಿಂದ 1969ರವರೆಗೆ ವಿಶ್ವಸಂಸ್ಥೆಯ ಅಂಗಸಂಸ್ಥೆ UNCTADಯಲ್ಲಿ ಕಾರ್ಯ ನಿರ್ವಹಿಸಿದ್ದೂ ಕೂಡ ಅವರ ಹೆಗ್ಗಳಿಕೆ.

1972ರಿಂದ 1976ರವರೆಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಆರ್ಥಿಕ ಸಲಹಾ ಸಮಿತಿಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಇವರು ಹಣಕಾಸು ಸಚಿವಾಲಯದ ಕಾರ್ಯದರ್ಶಿಯೂ ಆಗಿದ್ದರು. 1982ರಿಂದ 85ರವರೆಗೆ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, 1985ರಿಂದ 1987ರವರೆಗೆ ಯೋಜನಾ ಆಯೋಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.

ಇನ್ನು ರಾಜಕೀಯವಾಗಿ ನೋಡುವುದಾದರೆ 2004ರಿಂದ 2014ರವರೆಗೆ ಎರಡು ಅವಧಿಗೆ ಪ್ರಧಾನಿಯಾಗಿದ್ದ ಇವರು, ನೆಹರು, ಇಂದಿರಾ ಹಾಗೂ ಮೋದಿ ಬಳಿಕ ಸುದೀರ್ಘವಾಗಿ ಪ್ರಧಾನಿ ಹುದ್ದೆಯಲ್ಲಿದ್ದ ನಾಲ್ಕನೇ ಪ್ರಧಾನಿ ಎನಿಸಿಕೊಂಡಿದ್ದರು.

ಮಾಜಿ ಪ್ರಧಾನಿ ಚಂದ್ರಶೇಖರ್ ಅವರಿಗೆ ಆರ್ಥಿಕ ಸಲಹೆಗಾರರಾಗಿದ್ದ ಇವರು, 1991ರಲ್ಲಿ ಪಿ.ವಿ.ನರಸಿಂಹರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದುಕೊಂಡು ದೇಶದೆಲ್ಲೆಡೆ ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಿದ್ದರು. ತರುವಾಯ ಮಾಜಿ ಪ್ರಧಾನಿ ವಾಜಪೇಯಿ ಸರ್ಕಾರದ ವೇಳೆ ರಾಜ್ಯಸಭಾ ವಿಪಕ್ಷ ನಾಯಕರಾಗಿದ್ದರು. 1991ರಿಂದ 2019ರವರೆಗೆ ಅಸ್ಸಾಂನಿಂದ ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದ ಸಿಂಗ್, ಕೊನೆಯ ಬಾರಿಗೆ 2019ರಿಂದ 2024ರವರೆಗೆ ರಾಜಸ್ಥಾನದಿಂದ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವರು ಲೋಕಸಭಾ ಸದಸ್ಯರಾಗದೆ ಇದ್ದುದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *