ಅನುದಾನಿತ ಪದವಿ ಪೂರ್ವ ಹುದ್ದೆ ಭರ್ತಿ ಮಾಡಲಿ: ಸಂಕನೂರ್

ಹೊನ್ನಾವರ: 2015ರ ನಂತರ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ಮರಣ & ರಾಜೀನಾಮೆ ಸೇರಿ ಇತರೆ ಕಾರಣಗಳಿಂದ ತೆರವಾಗಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಅನುಮತಿ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ವಿ .ಸಂಕನೂರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ(ರಿ), ಧಾರವಾಡ” ಘಟಕದ ವತಿಯಿಂದ ನಗರದ ಎಸ್ಡಿಎಂ ಕಾಲೇಜಿನ ಸಭಾಂಗಣದಲ್ಲಿ ಜರುಗಿದ “ಕಾರವಾರ ಶೈಕ್ಷಣಿಕ ಜಿಲ್ಲಾ ಪದವಿ ಪೂರ್ವ ನೌಕರರ ಸಂಘದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಅನುದಾನಿತ ಶಿಕ್ಷಕರ ಕೊರತೆಯಿಂದಾಗಿ ಅನುದಾನಿತ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿದೆ. ಈ ಹಿಂದೆ ಅನುದಾನಕ್ಕೆ ಒಳಪಟ್ಟ ಪದವಿ ಕಾಲೇಜಿನಿಂದ ಬೇರ್ಪಟ್ಟ ಪದವಿ ಪೂರ್ವ ಕಾಲೇಜುಗಳಿಗೆ ಅನುದಾನಿತ ಹುದ್ದೆಯನ್ನು ಹೊಸದಾಗಿ ಸೃಜಿಸದೆ ಇಂತಹ ಕಾಲೇಜುಗಳು ಸಂಕಷ್ಟಕ್ಕೆ ಒಳಗಾಗಿದ್ದು, ಶೀಘ್ರವಾಗಿ ಅಗತ್ಯ ಇರುವ ಹುದ್ದೆಗಳನ್ನು ತುಂಬಬೇಕು ಹಾಗೂ ಅನುದಾನಕ್ಕೆ ಒಳಪಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. 2006ರ ನಂತರ ನೇಮಕವಾದ ಅನುದಾನಿತ ಉಪನ್ಯಾಸಕರಿಗೆ ಪಿಂಚಣಿ ವ್ಯವಸ್ಥೆ ಅನ್ವಯಿಸಿ, ಅವರ ನಿವೃತ್ತಿ ಜೀವನಕ್ಕೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಯಕ್ರಮದ ಅತಿಥಿ, ಎಂ.ಪಿ.ಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಮಾತನಾಡಿ, ಪದವಿಯಿಂದ ಬೇರ್ಪಟ್ಟ ಪದವಿ ಪೂರ್ವ ಕಾಲೇಜುಗಳಿಗೆ ಕೂಡಲೇ ಹೊಸ ಅನುದಾನಿತ ಹುದ್ದೆಗಳನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕಳೆದ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕುಮಟಾದ ನೆಲ್ಲಿಕೇರಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಧ್ಯಾನ ಭಟ್ ಸೇರಿದಂತೆ ಹೊನ್ನಾವರ ತಾಲೂಕಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ SSLC ಪರೀಕ್ಷೆಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪದಾಧಿಕಾರಿಗಳನ್ನು ಎಸ್.ವಿ.ಸಂಕನೂರ್ ಶಾಲು ಹೊದಿಸಿ ಸನ್ಮಾನಿಸಿದರು. ಕರ್ನಾಟಕ ರಾಜ್ಯ ಪದವಿ ಪೂರ್ವ ನೌಕರರ ಸಂಘ, ಕಾರವಾರದ ಅಧ್ಯಕ್ಷ ಭಾಸ್ಕರ್ ಹೆಗಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರವಾರ ಶೈಕ್ಷಣಿಕ ಜಿಲ್ಲಾ ಪದವಿ ಪೂರ್ವ ನೌಕರರ ಸಂಘದ ನೂತನ ಅಧ್ಯಕ್ಷ ರಮೇಶ್ ಎಸ್.ಪತ್ರೇಕರ್ ಸ್ವಾಗತಿಸಿದರೆ, ಎಂ.ಎಚ್.ಭಟ್ ಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *