ಇತ್ತೀಚೆಗೆ ಕರ್ನಾಟಕದಲ್ಲಿ ಅಕ್ರಮ ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಂಡ ಬಳಿಕ, ಬೆಂಗಳೂರಿನಲ್ಲಿ ಆಟೋ ಚಾಲಕರು ಕಡಿಮೆ ದೂರದ ಪ್ರಯಾಣಕ್ಕೂ ಪ್ರಯಾಣಿಕರಿಂದ ಅಧಿಕ ಶುಲ್ಕ ವಸೂಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಚಾಲಕರು ಮೀಟರ್ ಬಳಸುವುದನ್ನು ನಿರಾಕರಿಸುತ್ತಿದ್ದು, ಕಡಿಮೆ ಪ್ರಯಾಣಕ್ಕೂ ತಮ್ಮ ಇಚ್ಛೆಯ ಅನುಸಾರ ದರ ಕೇಳುತ್ತಿದ್ದಾರೆಂದು ಹಲವರು ಆರೋಪಿಸಿದ್ದಾರೆ. ಪ್ರಯಾಣಿಕರಿಗೆ ಪರ್ಯಾಯ ಆಯ್ಕೆಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಶೋಷಣೆ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸಾರಿಗೆ ಇಲಾಖೆಯು ತಪ್ಪಾಗಿ ನಡೆದುಕೊಳ್ಳುತ್ತಿರುವ ಆಟೋ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಕಳೆದ ಜೂನ್ 28ರಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಅಧಿಕೃತ ಸುತ್ತೊಲೆ ಹೊರಡಿಸಿದ್ದು, ಬೈಕ್ ಟ್ಯಾಕ್ಸಿಗಳ ನಿಷೇಧದ ನಂತರ ಪ್ರಯಾಣಿಕರಿಂದ ಬರುತ್ತಿರುವ ದೂರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದು, ಕೆಲ ಆಟೋ ಚಾಲಕರು ಆ ಕೊರತೆಯ ಲಾಭ ಪಡೆಯುತ್ತಾ ಪ್ರಯಾಣಿಕರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಇತ್ತೀಚಿನ ಘಟನೆಯೊಂದರಲ್ಲಿ, ಕೇವಲ 1.3 ಕಿ.ಮೀ. ಪ್ರಯಾಣಕ್ಕಾಗಿ ₹100.89 ವಸೂಲಿ ಮಾಡಲಾಗಿದೆ. ಆದರೆ ನಿಜವಾದ ಮೀಟರ್ ಶುಲ್ಕವು ₹48.49 ಮಾತ್ರ. ಈ ಘಟನೆ ಜೂನ್ 18ರಂದು ಪರಿಶೀಲನಾ ಅಭಿಯಾನದ ವೇಳೆ ಸಂಭವಿಸಿದ್ದು, ಅಧಿಕೃತ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಆಟೋಗಳ ಸಾಮಾನ್ಯ ಪ್ರವೃತ್ತಿಗೆ ಇದು ಉದಾಹರಣೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದಿದ್ದಾರೆ.