ಚಾಲಕರಿಗೆ ಶಾಕ್.. ನಾಳೆಯಿಂದ ಟೋಲ್ ಶುಲ್ಕ ಹೆಚ್ಚಳ!

2025ರ ಜುಲೈ 1ರಿಂದ ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ಸ್ ಸಿಟಿ ಹಾಗೂ ಕರ್ನಾಟಕ-ತಮಿಳುನಾಡು ಗಡಿಯ ಅತ್ತಿಬೆಲೆಯವರೆಗೆ ಬೆಂಗಳೂರು ಎಲಿವೇಟೆಡ್ ಟೋಲ್ ವೇ ಬಳಸುವ ಪ್ರಯಾಣಿಕರು ಹೆಚ್ಚು ಟೋಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಟೋಲ್ ದರಗಳನ್ನು ಪರಿಷ್ಕರಿಸಲಾಗಿದ್ದು, ನಾಳೆಯಿಂದ ಹೊಸ ದರಗಳು ಜಾರಿಗೆ ಬರಲಿವೆ.

ಸಾರ್ವಜನಿಕ ಪ್ರಕಟಣೆ ಪ್ರಕಾರ, ಈ ಪರಿಷ್ಕೃತ ಟೋಲ್ ದರವು 2026ರ ಜೂನ್ 30ರವರೆಗೆ ಜಾರಿಯಲ್ಲಿರುತ್ತದೆ. BETPL ಸಂಸ್ಥೆಯು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ದಿಂದ ಅತ್ತಿಬೆಲೆವರೆಗೆ ರಾಷ್ಟ್ರೀಯ ಹೆದ್ದಾರಿ 44ರ ಈ ಭಾಗದ ಅಭಿವೃದ್ಧಿ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಪರಿಷ್ಕರಿಸಿದ ಟೋಲ್ ದರಗಳ ಪ್ರಕಾರ, ಎಲಿವೇಟೆಡ್ ಭಾಗ 8.765 ಕಿ.ಮೀ.ರಿಂದ 18.750 ಕಿ.ಮೀ. ಅಂದರೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿವರೆಗೆ ಹಾಗೂ ನೆಲಮಟ್ಟದ ಭಾಗ(ಅತ್ತಿಬೆಲೆಯವರೆಗೆ 33.130 ಕಿ.ಮೀ.) ಉದ್ದಕ್ಕೂ:

🔹 ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಿಗೆ ಏಕಪ್ರಯಾಣಕ್ಕೆ ₹65, ಬಹುಪ್ರಯಾಣಕ್ಕೆ ₹95, ಮಾಸಿಕ ಪಾಸ್ ₹1,885 ಶುಲ್ಕ ಹಾಗೂ ದ್ವಿಚಕ್ರ ವಾಹನಗಳಿಗೆ ಏಕ ಪ್ರಯಾಣಕ್ಕೆ ₹25 ವಿಧಿಸಲಾಗುತ್ತದೆ. 

ಇನ್ನು ಟ್ರಕ್‌ಗಳು ಸೇರಿದಂತೆ ದೊಡ್ಡ ದೊಡ್ಡ ವಾಹನಗಳಿಗೆ ವಿಧಿಸಲಾಗುತ್ತಿದ್ದ ಟೋಲ್ ದರವು ಗಣನೀಯವಾಗಿ ಏರಿಕೆ ಕಂಡಿದೆ.

🔸 ಟ್ರಕ್‌ಗಳು ಮತ್ತು ಬಸ್ಸುಗಳಿಗೆ ಏಕ ಪ್ರಯಾಣಕ್ಕೆ ₹175, ಮಾಸಿಕ ಪಾಸ್ ₹5,275

🔸 ಮಲ್ಟಿ-ಅ್ಯಕ್ಸಲ್ ವಾಹನ(MAVs)ಗಳಿಗೆ ಏಕ ಪ್ರಯಾಣಕ್ಕೆ ₹350 ಹಾಗೂ ಮಾಸಿಕ ಪಾಸ್ ವಿತರಿಸಲು ₹10,550 ರೂ. ಶುಲ್ಕ ವಿಧಿಸಲಾಗುತ್ತದೆ.

ಅತ್ತಿಬೆಲೆ ಸಮೀಪ 32.700 ಕಿಮೀ ಇರುವ ಟೋಲ್ ಪ್ಲಾಜಾದಲ್ಲಿ, ಟೋಲ್‌ಗಳು ಕೇವಲ ನಾಲ್ಕು ಚಕ್ರದ ವಾಹನಗಳು ಮತ್ತು ಅದಕ್ಕಿಂತ ದೊಡ್ಡ ವಾಹನಗಳಿಗೆ ಮಾತ್ರ ಅನ್ವಯವಾಗುತ್ತವೆ. ದ್ವಿಚಕ್ರ ವಾಹನಗಳಿಗೆ ಇಲ್ಲಿ ಶುಲ್ಕ ವಿಧಿಸಲಾಗುವುದಿಲ್ಲ.

🔹 ಕಾರುಗಳಿಗೆ ಏಕ ಪ್ರಯಾಣಕ್ಕೆ ₹40, ಮಾಸಿಕ ಪಾಸ್ ಪಡೆಯಲು ₹1,130

🔹 MAVs: ಪ್ರತೀ ಪ್ರಯಾಣಕ್ಕೆ ₹265 ಹಾಗೂ ಮಾಸಿಕ ಪಾಸ್ ವಿತರಿಸಲು ₹7,915 ಪಡೆಯಲಾಗುತ್ತದೆ.

ಪ್ರಯಾಣಿಕರಲ್ಲಿ ಅಸಂತೋಷ:

ದೈನಂದಿನ ಪ್ರಯಾಣಿಕರು ಈ ಪರಿಷ್ಕೃತ ಟೋಲ್ ದರದ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ನಿಯತ್ತಾಗಿ ಟೋಲ್ ಶುಲ್ಕ ಪಾವತಿಸುತ್ತಿದ್ದರೂ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ದೈನಂದಿನ ಕೆಲಸಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಿರುವಾಗ ನಮ್ಮ ಹಣಕ್ಕೆ ಮೌಲ್ಯವಿದೆಯೇ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *