ಕಾರನ್ನು ಯೂಟರ್ನ್ ಮಾಡಿಕೊಳ್ಳುವಾಗ ವೇಗವಾಗಿ ಬಂದ ಕ್ಯಾಂಟರ್ ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿರುವ ಘಟನೆ ಇಂದು ಕುಣಿಗಲ್ ಬೈಪಾಸ್ ಬಳಿಯ ಉಗಿಬಂಡಿ ರೆಸ್ಟೋರೆಂಟ್ ಸಮೀಪ ನಡೆದಿದೆ.
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿದ್ದ ಕುಟುಂಬ, ದೇವರ ದರ್ಶನ ಮುಗಿಸಿಕೊಂಡು ವಾಪಸಾಗುತ್ತಿತ್ತು. ಈ ನಡುವೆ ಪುತ್ರನನ್ನು ಕುಣಿಗಲ್ ನ ವಾಲೀ ಇಂಟರ್ ನ್ಯಾಷನಲ್ ಸ್ಕೂಲಿಗೆ ಬಿಡಲು ಪೋಷಕರು ಕರೆದೊಯ್ಯುತ್ತಿದ್ದರು. ಈ ವೇಳೆ ಕಾರು ಯೂಟರ್ನ್ ತೆಗೆದುಕೊಳ್ಳುವುದನ್ನು ಗಮನಿಸದ ಕ್ಯಾಂಟರ್ ಚಾಲಕ, ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನಲ್ಲಿದ್ದ ಪತಿ, ಪತ್ನಿ ಮಗ, ಮಗಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತರನ್ನು ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ನಟರಾಜ ಬಡಾವಣೆಯ ನಿವಾಸಿಗಳಾದ ಸಿಬೇಗೌಡ, ಶೋಭಾ, ದುಂಬಿಶ್ರೀ ಮತ್ತು ಭಾನುಕಿರಣ್ ಗೌಡ ಎಂದು ಗುರುತಿಸಲಾಗಿದೆ.
ಈ ಸಂಬಂಧ ಕುಣಿಗಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.