ಡಾ.ರಾಜ್ ಕುಟುಂಬದಲ್ಲಿ ವಿಷಾದ

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರ ಕಿರಿಯ ಸಹೋದರಿ ನಾಗಮ್ಮ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ತಮ್ಮ ಸ್ವಗ್ರಾಮ ದೊಡ್ಡಗಾಜನೂರಿನಲ್ಲೇ ವಾಸವಿದ್ದರು. ಅಲ್ಲದೆ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ 92ನೇ ವಯಸ್ಸಿನಲ್ಲಿ ಇಂದು ವೈಕುಂಠ ಸೇರಿದ್ದಾರೆ.

ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರಿಗೆ ಡಾ.ರಾಜ್ ಸೇರಿ ಒಟ್ಟು ನಾಲ್ವರು ಮಕ್ಕಳು. ಇವರಲ್ಲಿ ನಾಗಮ್ಮ ಕೊನೆಯವರಾಗಿದ್ದರು. ಡಾ.ರಾಜ್, ವರದಣ್ಣ ಮತ್ತು ಶಾರದಮ್ಮ ತೀರಿಕೊಂಡ ನಂತರ ನಾಗಮ್ಮ ಮಾತ್ರವೇ ಇದ್ದರು. ಹಾಗಾಗಿ ಡಾ.ರಾಜ್ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ನಾಗಮ್ಮ ಅವರನ್ನೇ ತಮ್ಮ ಹಿರಿಯ ಕುಟುಂಬಸ್ಥೆ ಎಂದು ಪರಿಗಣಿಸಿದ್ದರು.

ಇನ್ನು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮನವರಿಗೆ ವಿಷಯ ತಿಳಿದರೆ ಆಘಾತವಾಗಬಹುದು ಎಂಬ ಕಾರಣಕ್ಕೆ ಪುನೀತ್ ರಾಜ್ ಕುಮಾರ್ ಅವರ ಸಾವಿನ ಸುದ್ದಿಯನ್ನು ತಿಳಿಸಿರಲಿಲ್ಲ. ಹಾಗಾಗಿ ನಾಗಮ್ಮ ಸಾಯುವ ಕೊನೆ ಘಳಿಗೆಯವರೆಗೂ ಕೂಡ ಪುನೀತ್ ಬದುಕಿದ್ದಾರೆ ಎಂಬ ನಂಬಿಕೆಯಲ್ಲಿಯೇ ಇದ್ದರು ಎನ್ನಲಾಗಿದೆ.

ಮೃತ ನಾಗಮ್ಮ ಅವರ ಅಂತ್ಯ ಸಂಸ್ಕಾರವು ನಾಳೆ ದೊಡ್ಡಗಾಜನೂರಿನಲ್ಲಿಯೇ ನೆರವೇರಲಿದೆ ಎಂಬ ಮಾಹಿತಿ ಲಭಿಸಿದ್ದು, ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬಸ್ಥರೆಲ್ಲರೂ ಭಾಗಿಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *