ಶಾಸಕರಾಗಿದ್ದವರು ಸಂಸದರಾಗಿ ಆಯ್ಕೆಯಾಗಿದ್ದರಿಂದ ತೆರವಾಗಿರುವ ರಾಜ್ಯದ ಚನ್ನಪಟ್ಟಣ, ಶಿಗ್ಗಾಂವಿ & ಸಂಡೂರು ಕ್ಷೇತ್ರಗಳಿಗೆ ಶೀಘ್ರವೇ ಉಪ ಚುನಾವಣೆ ನಡೆಯಲಿದೆ.
ಈ ಕುರಿತು ವರಿಷ್ಠರೊಂದಿಗೆ ಚರ್ಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಗೆ ತೆರಳಿದ್ದು, ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ನಡುವೆ ಮೂರೂ ಕ್ಷೇತ್ರಗಳ ಉಪ ಚುನಾವಣೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ತೀರ್ಮಾನವನ್ನು ರಾಜ್ಯ ನಾಯಕರು ತಮ್ಮ ಹೈಕಮಾಂಡ್ ಸಮೂಹಕ್ಕೇ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಮೂಲಗಳ ಪ್ರಕಾರ, ಚನ್ನಪಟ್ಟಣವನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಜೆಡಿಎಸ್ ಹವಣಿಸುತ್ತಿದೆ. ಆದರೆ ಮೈತ್ರಿ ಅಭ್ಯರ್ಥಿಯಾಗಿ, ಬಿಜೆಪಿಯ ಕಮಲ ಚಿಹ್ನೆ ಮೇಲೆ ಕಣಕ್ಕಿಳಿಯಲು ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಲಾಬಿ ನಡೆಸುತ್ತಿದ್ದಾರೆ. ಇದನ್ನು ಮನಗಂಡಿರುವ ಜೆಡಿಎಸ್, ಯೋಗೇಶ್ವರ್ ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ. ಆದರೆ ಜೆಡಿಎಸ್ ಚಿಹ್ನೆ ಮೇಲೆಯೇ ಕಣಕ್ಕಿಳಿಯಲಿ ಎಂಬ ವಾದವನ್ನು ಜನತಾದಳದ ನಾಯಕರು ಬಿಜೆಪಿ ವರಿಷ್ಠರ ಎದುರು ಪ್ರಸ್ತಾಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.