ಬಳ್ಳಾರಿ: 13,000ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಫೋಟೋಗಳು ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಾ ಬ್ಲಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ ಪೊಲೀಸರು ಕರ್ನಾಟಕದಲ್ಲಿ ಬಂಧಿಸಿದ್ದಾರೆ. ಪೊಲೀಸರಿಗೆ ಬಳ್ಳಾರಿ ಪೊಲೀಸರು ಸಹಕಾರ ನೀಡಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ.
ಸಂಡೂರು ಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದ 25 ವರ್ಷದ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಈ ಕುರಿತು ಮುಂಬೈ ಪೊಲೀಸರಿಗೆ ಯುವತಿಯೊಬ್ಬಳು ದೂರು ನೀಡಿ, ಸುಳ್ಳು ಸಾಮಾಜಿಕ ಖಾತೆ ಮೂಲಕ ಓರ್ವ ವ್ಯಕ್ತಿ ಬ್ಲಾಕ್‌ಮೇಲ್ ಮಾಡುತ್ತಿರುವುದಾಗಿ ಆರೋಪಿಸಿ ದೂರು ನೀಡಿದ್ದಳು. ನಂತರ ಮಹಾರಾಷ್ಟ್ರ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದರು. ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಿ, ಬ್ಲಾಕ್‌ಮೇಲ್ ಮಾಡುವ ವ್ಯಕ್ತಿಯ ಸ್ಥಳ ಪತ್ತೆ ಮಾಡಿದ ನಂತರ, ತಕ್ಷಣ ಸಂಡೂರಿಗೆ ಆಗಮಿಸಿ ಶುಭಂ ಕುಮಾರ್ ಮನೋಜ್‌ಪ್ರಸಾದ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ.
ಈತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಬಳಿ ಇದ್ದ ನಾಲ್ಕು ಸ್ಮಾರ್ಟ್‌ಫೋನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ 20ಕ್ಕೂ ಹೆಚ್ಚು ನಕಲಿ ಖಾತೆಗಳು ಮತ್ತು 100 ಇಮೇಲ್ ಐಡಿಗಳನ್ನು ಬಳಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಇವುಗಳ ಮೂಲಕ ಈತ ಮಹಿಳೆಯರನ್ನು ಬೆದರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಕಲಂಗಳನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧನದ ನಂತರ ಶುಭಂನ ಫೋನ್‌ನಲ್ಲಿ 13,500ಕ್ಕೂ ಹೆಚ್ಚು ಮಹಿಳೆಯರ ನಗ್ನ ಚಿತ್ರಗಳು ಹಾಗೂ ವಿಡಿಯೋಗಳು ಪತ್ತೆಯಾಗಿವೆ. ಈತ ಮಹಿಳೆಯರನ್ನು ಹಣ ಹಾಗೂ ಲೈಂಗಿಕತೆಗೆ ಬಳಸಿಕೊಳ್ಳಲು ಯತ್ನಿಸುತ್ತಿದ್ದ. ಶುಭಂ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.