ಉತ್ತರ ಕನ್ನಡ: ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋದಲ್ಲಿ ಮಿಂಚಿ ಜನಮನ ಗೆದ್ದಿದ್ದ ಖ್ಯಾತ ಹಾಸ್ಯ ಕಲಾವಿದ ಚಂದ್ರಶೇಖರ ಸಿದ್ದಿ ಅವರು ಇಂದು ದಿಢೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಟ್ಟಿಗೆ ಗ್ರಾಮದ ಕಾಡಿನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಹಾಗಾಗಿ ಯಾವುದೇ ಕಾರ್ಯಕ್ರಮಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ಸಾವಿಗೆ ನಿಖರ ಕಾರಣ ಏನೆಂಬುದೂ ಕೂಡ ತಿಳಿದುಬಂದಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇವರು ‘ಕಾಮಿಡಿ ಕಿಲಾಡಿಗಳು’ ಶೋ ಮುಕ್ತಾಯವಾದ ಬಳಿಕ ಕೆಲ ಧಾರಾವಾಹಿಗಳಲ್ಲೂ ಸಹ ನಟನಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲ, ತೆಲಂಗಾರಿನ ಮೈತ್ರಿ ಕಲಾ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದುಕೊಂಡು, ಸ್ಥಳೀಯ ಮಟ್ಟದಲ್ಲೂ ಉತ್ತಮ ಕಲಾವಿದರಾಗಿ ಹೆಸರುವಾಸಿಯಾಗಿದ್ದರು. ಆದರೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು, ಕೃಷಿಯತ್ತ ಮುಖ ಮಾಡಿದ್ದರು. ಇಂದು ಇದ್ದಕ್ಕಿದ್ದಂತೆ ನೇಣಿನ ಕುಣಿಕೆಗೆ ಕೊರಳೊಡ್ಡಿ ಕಲಾಭಿಮಾನಿಗಳಲ್ಲಿ ನೋವನ್ನುಂಟುಮಾಡಿದ್ದಾರೆ.
ಇವರು ಅತ್ಯುತ್ತಮ ಕ್ರೀಡಾಪಟುವೂ ಆಗಿದ್ದರು. ಕೃಷಿ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆ ಗಳಿಸಿ, ಕೂಲಿ ಕೆಲಸದಲ್ಲೂ ಸದಾ ಮುಂದಿರುತ್ತಿದ್ದರು. ಇವರ ಕುಟುಂಬವು ಯಲ್ಲಾಪುರ ತಾಲೂಕಿನ ತೆಲಂಗಾರ್ ಬಳಿಯ ಚಿಮ್ಮನಹಳ್ಳಿಯಲ್ಲಿ ವಾಸವಾಗಿತ್ತು. ಮೃತರು ಅವಿವಾಹಿತರಾಗಿದ್ದು, ಸಿದ್ದಿ ಜನಾಂಗದ ಸಂಪ್ರದಾಯದಂತೆ ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಇವರು ಶಿವಮೊಗ್ಗ ಮೂಲದ ನಾಟಕ ಸಂಸ್ಥೆ ನೀನಾಸಂನ ಹಳೆಯ ವಿದ್ಯಾರ್ಥಿಯಾಗಿದ್ದರು ಎಂಬುದು ಇಲ್ಲಿ ಗಮನಾರ್ಹ ಸಂಗತಿ.