ಬೆಂಗಳೂರು: ಡಿಸಿಎಂ ಹುದ್ದೆ ಬಗ್ಗೆ ಪದೇಪದೆ ಬಹಿರಂಗವಾಗಿ ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಮುಜುಗರವಾಗಲಿದೆ. ಹಾಗಾಗಿ ಇನ್ಮುಂದೆ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಬೇಡ ಎಂದು ಸಚಿವ ಕೆ.ಎನ್.ರಾಜಣ್ಣ ಅವರಿಗೆ ಸಿಎಂ ಸಿದ್ದರಾಮಯ್ಯನವರು ನೇರ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ರಾಜ್ಯದಲ್ಲಿ ಮೂರು ಡಿಸಿಎಂ ಸ್ಥಾನ ಸೃಜಿಸಬೇಕು. ಮೂರನ್ನೂ ಲಿಂಗಾಯತ ಸೇರಿದಂತೆ ಪ್ರಬಲ ಸಮುದಾಯಗಳಿಗೆ ಮೀಸಲಿಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ನಡುವೆ ಸಚಿವ ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಸೇರಿ ಹಲವಾರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರು.
ಈ ಹಿನ್ನೆಲೆಯಲ್ಲಿ ನಿನ್ನೆ ಪ್ರತಿಕ್ರಿಯಿಸಿದ್ದ ಕೃಷಿ ಸಚಿವ ಚೆಲುವರಾಯಸ್ವಾಮಿ, ರಾಜ್ಯದಲ್ಲಿ ಡಿಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿಯಾದಾಗ ಪ್ರಯತ್ನ ಮಾಡಿದರೆ ಒಳ್ಳೆಯದೆಂದು ಟಾಂಗ್ ನೀಡಿದ್ದರು.
ಅಂದಹಾಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದವರಾಗಿದ್ದು, ಅವರಿಗೆ ಅದೇ ಸಮುದಾಯದ ನಾಯಕರು ಬೆಂಬಲವಾಗಿ ನಿಂತಿರುವುದು ಗೊತ್ತೇ ಇದೆ.