ಬೆಂಗಳೂರು: ಕೆ.ಎನ್.ರಾಜಣ್ಣ ಅವರು ಇಂದು ಸಹಕಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈಗಾಗಲೇ ರಾಜೀನಾಮೆ ಪತ್ರ ಅಂಗೀಕಾರವಾಗಿದೆ. ಇದರ ಬೆನ್ನಲ್ಲೇ ರಾಜಣ್ಣ ಮತ್ತು ಅವರ ಪುತ್ರ ರಾಜೇಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ‘ಏನಪ್ಪಾ ಹೀಗ್ ಆಗೋಯ್ತಲ್ಲ..’ ಎಂದು ಆಘಾತ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಈ ಬೆನ್ನಲ್ಲೇ ವಾಲ್ಮೀಕಿ ಸಮುದಾಯದ ಹಿರಿಯ ದಲಿತ ಮುಖಂಡರಾಗಿರುವ ರಾಜಣ್ಣ ಅವರು, ತಮ್ಮದೇ ಸಮುದಾಯದ ಮತ್ತೋರ್ವ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಅವರನ್ನು ಅವರ ಕಚೇರಿಯಲ್ಲೇ ಖುದ್ದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ನಂತರ ಮತ್ತೋರ್ವ ದಲಿತ ನಾಯಕ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನೂ ಭೇಟಿ ಮಾತಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಪರಮೇಶ್ವರ್ ಅವರು ತಮ್ಮ ತವರು ಜಿಲ್ಲೆ ತುಮಕೂರಿನ ಉಸ್ತುವಾರಿ ಸಚಿವರಾಗಿದ್ದು, ರಾಜಣ್ಣ ಅವರೂ ಕೂಡ ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದಲೇ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ರಾಜಣ್ಣ ಅವರಿಗೂ ಮುನ್ನ ವಾಲ್ಮೀಕಿ ಸಮುದಾಯದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಅದೇ ಸಮುದಾಯದ ರಾಜಣ್ಣ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತ ನಾಯಕರಿಂದ ರಾಜೀನಾಮೆ ಪಡೆದು ಅಪಮಾನ ಮಾಡಲಾಗಿದೆ ಎಂದು ಆರೋಪಿಸುತ್ತಾ, ವಿಪಕ್ಷ ನಾಯಕರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.