ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಶುಭ ಸುದ್ದಿ ನೀಡಲಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜು.23ರಂದು 2024-25ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ವೇಳೆ ಸ್ಟಾಂಡರ್ಸ್ ಡಿಡಕ್ಷನ್ ಮಿತಿಯನ್ನು 50 ಸಾವಿರದಿಂದ 70 ಸಾವಿರದವರೆಗೆ ಏರಿಸಲಿದ್ದಾರೆ. ಜತೆಗೆ ರಾಷ್ಟ್ರೀಯ ಪಿಂಚಿಣಿ ಯೋಜನೆಯಡಿ 25ರಿಂದ 30 ವರ್ಷ ಸೇವೆ ಸಲ್ಲಿಸಿದ ನೌಕರರು, ನಿವೃತ್ತಿ ಬಳಿಕ ತಮ್ಮ ವೇತನದ ಅರ್ಧದಷ್ಟು ಮೊತ್ತವನ್ನು ಪಿಂಚಿಣಿಯಾಗಿ ಪಡೆಯುವ ಹಾಗೂ ನಿವೃತ್ತಿಯಾದ ವೇಳೆ ಒಂದಷ್ಟು ನಿಗದಿತ ಮೊತ್ತವನ್ನೂ ಸರ್ಕಾರ ಪಾವತಿಸುವ ಬಗ್ಗೆ ಬಜೆಟ್ ನಲ್ಲಿ ಸಚಿವರು ಘೋಷಿಸಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಇನ್ನು ನೂತನ ಪಿಂಚಿಣಿ ಯೋಜನೆ ಜಾರಿಗೊಳಿಸುವುದು ಬೇಡ ಎಂದು ವಿರೋಧಿಸುತ್ತಿರುವ ನಡುವೆ ಸರ್ಕಾರದ ಈ ನಿರ್ಧಾರ ಗಮನ ಸೆಳೆಯುತ್ತಿದ್ದು, ಈಗಾಗಲೇ ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ನೇತೃತ್ವದ ಸಮಿತಿ ಆಂಧ್ರ ಪ್ರದೇಶ ಸೇರಿದಂತೆ ಹಲವೆಡೆ ಈ ಬಗ್ಗೆ ಅಧ್ಯಯನ ನಡೆಸಿದೆ ಎಂದೇ ಹೇಳಲಾಗುತ್ತಿದೆ.