ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ನಟಿ, ಮಾಜಿ ಸಂಸದೆ ಸುಮಲತಾ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಮೊದಲು ರೇಣುಕಾಸ್ವಾಮಿ ಅವರ ಪತ್ನಿ ಮತ್ತು ಪೋಷಕರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲೆಂದು ಹಾಗೂ ಅವರಿಗೆ ಸೂಕ್ತ ನ್ಯಾಯ ಸಿಗಲೆಂದು ಪ್ರಾರ್ಥಿಸುತ್ತೇನೆ. ನಟ ದರ್ಶನ್ ಈ ಪ್ರಕರಣದಲ್ಲಿ ಕೇವಲ ಆರೋಪಿಯಾಗಿದ್ದಾರೆ ಅಷ್ಟೇ, ಅವರು ಅಪರಾಧಿಯಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ದರ್ಶನ್ ನನಗೆ ಈಗಲೂ ಹಿರಿಯ ಮಗನೇ. ಅವರಿಗೂ ಎಲ್ಲರಂತೆ ಕಾನೂನಲ್ಲಿ ಹೋರಾಡುವ ಹಕ್ಕಿದೆ.
ದರ್ಶನ್ ಸದಾ ನನ್ನನ್ನು ಮದರ್ ಇಂಡಿಯಾ ಎನ್ನುತ್ತಾರೆ. ಹಾಗಾಗಿ ಈಗಲೂ ಅವರು ನ್ಯಾಯಯುತವಾಗಿ ಹೊರ ಬರಲೆಂದು ಪ್ರಾರ್ಥಿಸುತ್ತೇನೆ. ನಾನು ಕಲಾವಿದೆಯಾಗಿ, ಸಂಸದೆಯಾಗಿ, ತಾಯಿಯಾಗಿ ಹಾಗೂ ವ್ಯಕ್ತಿಯಾಗಿ ಎಲ್ಲಾ ವಿಚಾರಗಳನ್ನೂ ಗಂಭೀರವಾಗಿ ಪರಿಗಣಿಸುತ್ತೇನೆ. ಅಂತೆಯೇ ಈ ಪ್ರಕರಣದಲ್ಲೂ ನ್ಯಾಯ, ನೀತಿಯಿಂದ ನಡೆದುಕೊಂಡವರಿಗೆ ಜಯ ಸಿಗಲೆಂದು ಬಯಸುತ್ತೇನೆ ಎಂದಿದ್ದಾರೆ.