ನಟಿ ಅನುಷ್ಕಾ ಶೆಟ್ಟಿಗೆ ವಿಚಿತ್ರ ಕಾಯಿಲೆ!

‘ಬಾಹುಬಲಿ’ ಖ್ಯಾತಿಯ ಕನ್ನಡದ ನಟಿ ಅನುಷ್ಕಾ ಶೆಟ್ಟಿ ತಮ್ಮ ಆರೋಗ್ಯದ ಬಗೆಗಿನ ರಹಸ್ಯವೊಂದನ್ನು ಹೊರಹಾಕಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನನಗೆ ವಿಚಿತ್ರ ಕಾಯಿಲೆ ಇದೆ. ಅದನ್ನು ಆಂಗ್ಲ ಭಾಷೆಯಲ್ಲಿ Pseudobulbar ಎಂದು ಕರೆಯುತ್ತಾರೆ. ಇದು ನರ ದೌರ್ಬಲ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇದನ್ನು ಸಾಮಾನ್ಯ ಮಾತಿನಲ್ಲಿ ಹೇಳುವುದಾದರೆ ನಗುವ ರೋಗ(laughing disease) ಎನ್ನಬಹುದು.
.
ಕೆಲವೊಮ್ಮೆ ಮನಸ್ಸಿನ ಭಾವನೆಗಳಿಗೆ ಸಂಬಂಧಿಸದೆ ಇದ್ದಕ್ಕಿದ್ದಂತೆ ನಗು ಬರುತ್ತದೆ. ಅಂತಹ ನಗುವನ್ನು ನಿಯಂತ್ರಿಸಲು ನನಗೆ ಸಾಧ್ಯವಾಗುವುದಿಲ್ಲ. ನಗುವಿನ ಬದಲು ಅಳು ಬಂದರೂ ಬರಬಹುದು. ಅಳುವನ್ನೂ ನನಗೆ ನಿಯಂತ್ರಿಸಲು ಆಗುವುದಿಲ್ಲ. ಅಂತಹ ವಿಚಿತ್ರ ಕಾಯಿಲೆಯಿಂದ ನಾನು ಬಳಲುತ್ತಿದ್ದೇನೆ.

ನಾನು ಕಾಮಿಡಿ ದೃಶ್ಯಗಳನ್ನು ನೋಡುವಾಗ ನೆಲದಲ್ಲಿ ಬಿದ್ದು ಉರುಳಾಡುತ್ತಾ, 15ರಿಂದ 20 ನಿಮಿಷಗಳವರೆಗೆ ನಕ್ಕಿದ್ದೇನೆ. ಕೆಲವೊಮ್ಮೆ ಸಿನಿಮಾ ಸೆಟ್ ಗಳಲ್ಲಿ ನನಗೆ ನಗು ನಿಯಂತ್ರಣಕ್ಕೆ ಬಾರದ ಕಾರಣ ಚಿತ್ರೀಕರಣವೇ ನಿಂತುಹೋದ ಸಾಕಷ್ಟು ಉದಾಹರಣೆಗಳಿವೆ ಎಂದು ಹೇಳಿಕೊಂಡಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಅವರು ದಕ್ಷಿಣ ಕನ್ನಡದ ಪುತ್ತೂರು ಮೂಲದವರಾಗಿದ್ದು, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದಾರೆ. ಅತ್ಯುತ್ತಮ ಪಾತ್ರ ಸಿಕ್ಕಿದರೆ ಕನ್ನಡ ಚಿತ್ರಗಳಲ್ಲೂ ನಟಿಸುತ್ತೇನೆ. ನನಗೆ ನಟಿಸಬಾರದೆಂಬ ಭಾವನೆ ಏನೂ ಇಲ್ಲ ಎಂದು ಖುದ್ದು ನಟಿಯೇ ಸ್ಪಷ್ಟಪಡಿಸಿದ್ದುದನ್ನು ಕನ್ನಡಾಭಿಮಾನಿಗಳು ಮರೆಯುವಂತಿಲ್ಲ.

ಇನ್ನು ನಟಿಗೆ ತೆಲುಗಿನ ‘ಅರುಂಧತಿ’ ಹಾಗೂ ‘ಬಾಹುಬಲಿ’ ಚಿತ್ರಗಳು ಭಾರೀ ಯಶಸ್ಸು ತಂದುಕೊಟ್ಟಿದ್ದವು. ಇದೇ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿರುವ ಪ್ರಭಾಸ್ ಅವರೊಂದಿಗೆ ನಟಿ ಡೇಟಿಂಗ್ ಮಾಡುತ್ತಿದ್ದು, ಅವರನ್ನೇ ವರಿಸಲಿದ್ದಾರೆಂಬ ಗುಸುಗುಸು ಸುದ್ದಿ ಕೇಳಿಬಂದಿತ್ತು. ಇತ್ತೀಚೆಗಷ್ಟೇ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎಂಬ ಗಾಸಿಪ್ ಕೂಡ ಹಬ್ಬಿತ್ತು. ಆದರೆ ನಟಿ ಈಗಲೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿಲ್ಲ ಎಂಬುದು ಮಾತ್ರ ತೆರೆದ ಪುಸ್ತಕವಾಗಿದೆ.

Leave a Reply

Your email address will not be published. Required fields are marked *