ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ದರ್ಶನ್ ಅಭಿಮಾನಿಗಳು ತಮ್ಮ ನಟನ ಪರ ನಿಂತಿದ್ದು, ಈ ಪರಿಸ್ಥಿತಿಯಲ್ಲೂ ಡಿ-ಬಾಸ್ ಕ್ರೇಜ್ ಮುಂದುವರಿಸಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಅವರಿಗೆ ವಿಚಾರಣಾಧೀನ ಖೈದಿ ಸಂಖ್ಯೆ ʼ6106ʼ ಅನ್ನು ನೀಡಲಾಗಿದೆ. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಈ ನಂಬರ್ ಅನ್ನು ಮೆರೆಸಲಾರಂಭಿಸಿದ್ದಾರೆ. ತಮ್ಮ ವಾಹನಗಳ ಮೇಲೆ “ಖೈದಿ ನಂಬರ್ 6106” ಎಂದು ಸ್ಟಿಕ್ಕರ್ ಅಂಟಿಸಿಕೊಳ್ಳುತ್ತಾ ದರ್ಶನ್ ಪರ ಬೆಂಬಲಕ್ಕೆ ನಿಂತಿದ್ದಾರೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ. ಜೈಲಿನಲ್ಲಿ ದರ್ಶನ್‌ಗೆ ನೀಡಲಾಗಿರುವ ಕೈದಿ ನಂಬರ್ ಅಭಿಮಾನಿಗಳಿಗೆ ಇದೀಗ ಲಕ್ಕಿ ನಂಬರ್ ಆಗುತ್ತಿದೆ. ಸದ್ಯ ಹೀಗೊಂದು ಟ್ರೆಂಡಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ʼ6106ʼ ಟೈಟಲ್‌ಗೂ ಡಿಮ್ಯಾಂಡ್: ಖೈದಿ ನಂಬರ್ 6106 ಎಂಬ ಶೀರ್ಷಿಕೆ ನಮಗೆ ಬೇಕು ಎಂದು ಭದ್ರಾವತಿ ಮೂವೀ ಮೇಕರ್ಸ್ ಸಂಸ್ಥೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದೆ. ಈ ನಡುವೆ ಈ ಅರ್ಜಿಯನ್ನು ಪರಿಶೀಲಿಸಿದ ಮಂಡಳಿ, ಸದ್ಯಕ್ಕೆ ಈ ಟೈಟಲ್‌ಅನ್ನು ಕೊಡಬೇಕೋ ಬೇಡವೋ ಎಂಬ ಗೊಂದಲದಲ್ಲಿ ತಡೆ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಆರೋಪಿಗಳನ್ನು ‘ಡಿ ಗ್ಯಾಂಗ್’ ಎಂದು ಕರೆಯಲಾಗುತ್ತಿದೆ. ಈ ಮಧ್ಯೆ ತಮಗೆ ‘ಡಿ ಗ್ಯಾಂಗ್’ ಟೈಟಲ್ ಬೇಕು ಎಂದು ನಿರ್ದೇಶಕ ರಾಕಿ ಸೊಮ್ಲಿ ಈಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಆಗಲೂ ಕೂಡ ಫಿಲ್ಮ್ ಚೇಂಬರ್ ಟೈಟಲ್ ನೀಡಲು ನಿರಾಕರಿಸಿತ್ತು.

ದರ್ಶನ್ ಗೆಳತಿ ಪವಿತ್ರಾ ಗೌಡಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಜೂನ್ 8ರಂದು ಬೆಂಗಳೂರಿಗೆ ಕರೆಸಿ, ಪಟ್ಟಣಗೆರೆಯ ನಿರ್ಜನ ಪ್ರದೇಶದಲ್ಲಿ ಅವರ ಮೇಲೆ ಹಲ್ಲೆ ಮಾಡಿ ಕೊಲೆಗೈಯ್ಯಲಾಗಿದೆ. ಆನಂತರ ಶವವನ್ನು ತಡರಾತ್ರಿ ಕಾಮಾಕ್ಷಿ ಪಾಳ್ಯ ಸಮೀಪದ ರಾಜಕಾಲುವೆಯಲ್ಲಿ ಎಸೆಯಲಾಗಿತ್ತು ಎಂದು ಆರೋಪಿಲಾಗಿದೆ.